ADVERTISEMENT

ಸರ್ಕಾರದ ಅಂದಾಜು ನಿಖರವಾಗಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST

ಬೆಂಗಳೂರು: ರಾಜ್ಯದ 123 ತಾಲ್ಲೂಕುಗಳಲ್ಲಿ ಬೀಕರ ಬರದಿಂದಾಗಿ 20,000 ಕೋಟಿ ರೂಪಾಯಿ ಬೆಳೆ ನಷ್ಟ ಸಂಭವಿಸಿದೆ. ಆದರೆ, ಸರ್ಕಾರ ಬೆಳೆಹಾನಿಯ ನಿಖರ ಅಂದಾಜು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪ್ರತಿ ತಾಲ್ಲೂಕಿನಲ್ಲೂ ಕನಿಷ್ಠ 200 ಕೋಟಿ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಆದರೆ, ಸಚಿವರು ಮತ್ತು ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಅಂದಾಜು ಸಿದ್ಧಪಡಿಸಿ ಕೇವಲ 4,500 ಕೋಟಿ ರೂಪಾಯಿ ಹಾನಿಯಾಗಿದೆ ಎಂಬ ವರದಿ ನೀಡುತ್ತಿದ್ದಾರೆ~ ಎಂದರು.

`ಕಾಂಗ್ರೆಸ್ ಪಕ್ಷದಿಂದ ಮೂರು ತಂಡಗಳನ್ನು ಬರ ಅಧ್ಯಯನಕ್ಕಾಗಿ ನಿಯೋಜಿಸಲಾಗಿದೆ. ನನ್ನ ನೇತೃತ್ವದಲ್ಲಿ ಒಂಬತ್ತು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇವೆ. ಅನೇಕ ಕಡೆಗಳಲ್ಲಿ ಕುಡಿಯುವ ನೀರು ದೊರೆಯುತ್ತಿಲ್ಲ. ಬಳ್ಳಾರಿಯ ಕೂಡ್ಲಿಗಿ ಮತ್ತು ಸಂಡೂರು ತಾಲ್ಲೂಕಿನಲ್ಲಿ ಭೀಕರ ಪರಿಸ್ಥಿತಿ ಇದೆ. ಹಲವು ಹಳ್ಳಿಗಳಿಗೆ ಈವರೆಗೂ ಅಧಿಕಾರಿಗಳು ಭೇಟಿ ನೀಡಿಲ್ಲ. ನಾವು ಸ್ಥಳಕ್ಕೆ ಹೋದ ಬಳಿಕ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ~ ಎಂದು ವಿವರಿಸಿದರು.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್‌ಆರ್‌ಇಜಿಎ) ಅನುದಾನವನ್ನೂ ಬರಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೂಡ್ಲಿಗಿ ತಾಲ್ಲೂಕಿನಲ್ಲಿ ಹಿಂದೆ ಅನುದಾನದ ದುರುಪಯೋಗ ನಡೆದಿದೆ ಎಂಬ ಕಾರಣಕ್ಕಾಗಿ ಎರಡು ವರ್ಷಗಳಿಂದ ಎನ್‌ಆರ್‌ಇಜಿಎ ಅನುದಾನವನ್ನು ಬಳಸಿಯೇ ಇಲ್ಲ. ಇತರೆ ಕಡೆಗಳಲ್ಲಿ ಎನ್‌ಆರ್‌ಇಜಿಎ ಹಣವನ್ನು ಮಾತ್ರವೇ ಸರ್ಕಾರ ನೆಚ್ಚಿಕೊಂಡಿದೆ. ರಾಜ್ಯದ ಬೊಕ್ಕಸದಿಂದ ಬಿಡಿಗಾಸನ್ನೂ ಬರ ಪರಿಹಾರಕ್ಕೆ ಒದಗಿಸಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.