ರಾಮನಗರ: ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಕಾನ್ವೆಂಟ್ ಶಾಲೆಗಳ ಶೈಲಿಯ ಇಂಗ್ಲಿಷ್ ಪಠ್ಯಕ್ರಮ ಅಳವಡಿಸಲು ರಾಮನಗರ ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಕಾನ್ವೆಂಟ್‌ಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪಠ್ಯಕ್ರಮದ ಮಾದರಿಯಲ್ಲೇ ಸರ್ಕಾರಿ ಶಾಲೆಗಳಲ್ಲೂ ಅದೇ ಕ್ರಮ ಅನುಸರಿಸಲು ಚಿಂತಿಸಲಾಗಿದೆ.
`ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಣ ಸೂಕ್ತ ದೊರೆಯದ ಕಾರಣ ಅನೇಕ ಸ್ಪರ್ಧಾ ಕ್ಷೇತ್ರಗಳಲ್ಲಿ ಹಿಂದೆ ಬೀಳುತ್ತಿದ್ದಾರೆ. ತಕ್ಕ ಸಾಮರ್ಥ್ಯ ತೋರದ ಕಾರಣ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಆಪಾದನೆ ಇದೆ. ಇದನ್ನು ಹೋಗಲಾಡಿಸಲು ಹಾಗೂ ವಿದ್ಯಾರ್ಥಿಗಳನ್ನು ಸ್ಪರ್ಧಾ ಜಗತ್ತಿಗೆ ಆರಂಭದಿಂದಲೇ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 2ನೇ ತರಗತಿವರೆಗೆ ಕಾನ್ವೆಂಟ್ ಶೈಲಿಯ ಇಂಗ್ಲಿಷ್ ಪಠ್ಯವನ್ನು ಸರ್ಕಾರಿ ಶಾಲೆಗಳಲ್ಲೂ ಹೇಳಿಕೊಡಲಾಗುವುದು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಹ್ಲಾದ ಗೌಡ `ಪ್ರಜಾವಾಣಿ'ಗೆ ತಿಳಿಸಿದರು.
ಮೌಖಿಕ ಆದೇಶ: `ಒಂದನೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಅಕ್ಷರಾಭ್ಯಾಸದ ಜತೆಗೆ ರೈಮ್ಸ, ಕಥೆಗಳನ್ನು ಆಕರ್ಷಣೀಯವಾಗಿ ಹೇಳಿಕೊಡಲಾಗುವುದು. ಹೇಗಿದ್ದರೂ ಸರ್ಕಾರ 1ನೇ ತರಗತಿಯಿಂದ ಸಂವಹನ (ಕಮ್ಯುನಿಕೇಟಿವ್) ಇಂಗ್ಲಿಷನ್ನು ಒಂದು ವಿಷಯವಾಗಿ ಬೋಧಿಸಲು ಅನುಮತಿ ನೀಡಿದೆ. ಇದಕ್ಕೆ ಪೂರಕವಾಗುವಂತೆ ಕಾನ್ವೆಂಟ್‌ನ ಇಂಗ್ಲಿಷ್ ಪಠ್ಯವನ್ನೂ ಹೇಳಿಕೊಡಲು ಶಿಕ್ಷಕರಿಗೆ ಮೌಖಿಕ ಆದೇಶ ನೀಡಲಾಗುವುದು' ಎಂದು ಅವರು ವಿವರಿಸಿದರು.
`ಇದು ಕಡ್ಡಾಯ ಅಲ್ಲದಿದ್ದರೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಇಂಗ್ಲಿಷ್ ಕಲಿಕೆಗೆ ಒತ್ತು ನೀಡುವಂತೆ ಶಿಕ್ಷಕರಿಗೆ ತಿಳಿಸಲಾಗಿದೆ. ನಲಿ-ಕಲಿ ಯೋಜನೆಯ ಜತೆಗೆ ಹಂತ ಹಂತವಾಗಿ ಇಂಗ್ಲಿಷ್ ಕಲಿಸುವಂತೆಯೂ ಸೂಚಿಸಲಾಗುವುದು' ಎಂದು ಅವರು ಪ್ರತಿಕ್ರಿಯಿಸಿದರು.
`ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ ಆಗಬಾರದು ಎಂಬ ಉದ್ದೇಶದಿಂದ 1 ಮತ್ತು 2ನೇ ತರಗತಿಗೆ ವಿಶೇಷವಾಗಿ ಒತ್ತು ನೀಡಿ ಎಲ್‌ಕೆಜಿ, ಯುಕೆಜಿ ಮಾದರಿಯಲ್ಲೇ ಇಂಗ್ಲಿಷ್ ಕಲಿಸುವಂತೆ ಡಿಡಿಪಿಐಗೆ ಸೂಚಿಸಿರುವುದಾಗಿ' ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.
ಮಕ್ಕಳ ಕಲಿಕಾ ಶಕ್ತಿ ಹೆಚ್ಚು:`ಮಕ್ಕಳಿಗೆ ಕಲಿಕಾ ಶಕ್ತಿ ಹೆಚ್ಚಿರುತ್ತದೆ. ಬಾಲ್ಯದ ಹಂತದಲ್ಲಿಯೇ ಎರಡು-ಮೂರು ಭಾಷೆಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಅವರಿಗಿರುತ್ತದೆ. ಆದ್ದರಿಂದ ಕನ್ನಡದ ಜತೆಗೆ ಇಂಗ್ಲಿಷನ್ನು 1ನೇ ತರಗತಿಯಿಂದ ವ್ಯವಸ್ಥಿತವಾಗಿ ಹೇಳಿಕೊಟ್ಟರೆ ಆ ಮಕ್ಕಳ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ' ಎಂದರು.
`ಮಕ್ಕಳನ್ನು ಇಂಗ್ಲಿಷ್‌ನತ್ತ ಸೆಳೆಯುವ ಸಲುವಾಗಿ ವಾರಕ್ಕೊಮ್ಮೆ ದೊಡ್ಡ ಶಾಲೆಗಳಲ್ಲಿ ಪ್ರೊಜೆಕ್ಟರ್ ನೆರವಿನಿಂದ ಕಲಿಕೆಯ ಸಿ.ಡಿಗಳನ್ನು ಪ್ರದರ್ಶಿಸಲಾಗುವುದು. ಕಾರ್ಟೂನ್‌ಗಳ ಮೂಲಕ ಮನರಂಜನೆಯ ಜತೆಗೆ ಇಂಗ್ಲಿಷ್ ಕಲಿಕೆಯೂ ಸಿಗುವಂತಹ ಸಿ.ಡಿಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಲು ಚಿಂತಿಸಲಾಗಿದೆ' ಎಂದು ಅವರು ಹೇಳಿದರು.
`ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಅದಕ್ಕಾಗಿ ಬಿಡದಿ, ಹಾರೋಹಳ್ಳಿ ಕೈಗಾರಿಕಾ ವ್ಯಾಪ್ತಿಯ ಕೈಗಾರಿಕೋದ್ಯಮಿಗಳನ್ನು ಸಂಪರ್ಕಿಸಲಾಗುವುದು. ಅವರು ಸಮುದಾಯ ಅಭಿವೃದ್ಧಿಗೆಂದು ಮಾಡುವ ಖರ್ಚಿನಲ್ಲಿ ಜಿಲ್ಲೆಗೆ ಸುಮಾರು 150 ಇಂಗ್ಲಿಷ್ ಶಿಕ್ಷಕರನ್ನು ಒದಗಿಸುವಂತೆ ಕೋರಲಾಗುವುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.