ADVERTISEMENT

`ಸಾಮಾನ್ಯ ವರ್ಗ' ಎಂಬ ಅಕ್ರಮದ ಹೆದ್ದಾರಿ!

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 20:27 IST
Last Updated 4 ಜುಲೈ 2013, 20:27 IST

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ `ಸಾಮಾನ್ಯ ವರ್ಗ' ಎನ್ನುವುದು ಅಕ್ರಮದ ಹೆದ್ದಾರಿಯಾಗಿದೆ. 1998, 1999, 2004ರ ನೇಮಕಾತಿಯಲ್ಲಿ ಇಂತಹ ಅಕ್ರಮ ನಡೆದಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಈಗಲೂ ಇಂತಹ ಅಕ್ರಮ ನಡೆದಿರುವ ಶಂಕೆ ಮೂಡಿದೆ.

ಮೀಸಲು ಅಭ್ಯರ್ಥಿಯೊಬ್ಬ ಎಲ್ಲರಿಗಿಂತ ಹೆಚ್ಚು ಅಂಕ ಪಡೆದರೆ ಆತ ಸಾಮಾನ್ಯ ವರ್ಗದಲ್ಲಿಯೇ ಆಯ್ಕೆಯಾಗುತ್ತಾನೆ. ಆತ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಎಂಬ ಕಾರಣಕ್ಕೆ ಮೀಸಲಾತಿ ಲಾಭ ಪಡೆದು ಆಯ್ಕೆಯಾಗುವವರ ಸಂಖ್ಯೆ ಕಡಿಮೆ ಆಗುವುದಿಲ್ಲ. ಈ ಅಸ್ತ್ರವನ್ನು ಉಪಯೋಗಿಸಿಕೊಂಡು ಒಂದೇ ಜಾತಿಯ ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡಲು ಸಾಧ್ಯವಿದೆ. ಕೆಪಿಎಸ್‌ಸಿಯಲ್ಲಿ ಈ ತಂತ್ರ ಬಳಕೆಯಾಗುವುದು ಮಾಮೂಲಾಗಿದೆ.

1998ರಲ್ಲಿ 391 ಸ್ಥಾನಗಳ ನೇಮಕಾತಿಗೆ ಪರೀಕ್ಷೆ ನಡೆಯಿತು. ಅದರಲ್ಲಿ 187 ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು. ಹೀಗೆ ಮೀಸಲಾತಿ ಇಲ್ಲದ ಸ್ಥಾನಗಳಲ್ಲಿ 27 ಮಂದಿ 3ಎ ವರ್ಗದವರು (ಒಂದೇ ಜಾತಿಯವರು) ಆಯ್ಕೆಯಾಗಿದ್ದಾರೆ. ಉಳಿದಂತೆ ಎಸ್‌ಸಿ, ಎಸ್‌ಟಿ, ಸಿ-1, ಸಿ-2, 2ಬಿ ಮತ್ತು 3ಬಿ ವರ್ಗಕ್ಕೆ ಸೇರಿದವರಲ್ಲಿ 7 ಮಂದಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದಾರೆ. ಅದೇ ರೀತಿ 1999ರಲ್ಲಿ 191 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಯಿತು. ಅದರಲ್ಲಿ 96 ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಸಿಗಬೇಕಾಗಿತ್ತು. ಇದರಲ್ಲಿಯೂ 3ಎ ವರ್ಗದ 4 ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದು ಸಾಮಾನ್ಯ ವರ್ಗದ ಹುದ್ದೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಉಳಿದ ಮೀಸಲಾತಿ ವರ್ಗಕ್ಕೆ ಸೇರಿದ 7 ಮಂದಿಗೆ ಸಾಮಾನ್ಯ ವರ್ಗದ ಕೋಟಾದಲ್ಲಿಯೇ ಹುದ್ದೆ ಸಿಕ್ಕವು. 2004ರಲ್ಲಿ 152 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಯಿತು. ಅದರಲ್ಲಿ 75 ಹುದ್ದೆಗಳು ಮೀಸಲಾತಿ ರಹಿತ ಹುದ್ದೆಗಳಿದ್ದವು. ಈ 75ರಲ್ಲಿಯೂ 3ಎಗೆ ಸೇರಿದ 14 ಮತ್ತು ಇತರ ಮೀಸಲಾತಿ ವರ್ಗದ 12 ಮಂದಿ ಉದ್ಯೋಗ ಪಡೆದುಕೊಂಡರು.

ತಮಗೆ ಬೇಕಾದ ಮತ್ತು ತಮ್ಮ ಜಾತಿಯ ಅಭ್ಯರ್ಥಿಗಳೇ ಹೆಚ್ಚಿನ ಅಂಕ ಪಡೆಯುವಂತೆ ನೋಡಿಕೊಳ್ಳುವ ವ್ಯವಸ್ಥೆ ಕೆಪಿಎಸ್‌ಸಿಯಲ್ಲಿದೆ ಎಂದು ಮೂಲಗಳು ತಿಳಿಸುತ್ತವೆ. ಒಂದೇ ಜಾತಿಯ ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಏರಿದರೆ ಪ್ರತಿಭಾವಂತ ಇತರ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. `ಈ ಬಾರಿಯೂ ಇಂತಹ ಟ್ರಿಕ್ ನಡೆದಿದೆ. ಇದು ಪೂರ್ವಭಾವಿ ಪರೀಕ್ಷೆಯಿಂದ ಸಂದರ್ಶನದವರೆಗೆ ನಡೆಯುವ ಪ್ಯಾಕೇಜ್.

ಪೂರ್ವಭಾವಿ ಪರೀಕ್ಷೆಯಿಂದ ಸಂದರ್ಶನದವರೆಗೂ ಹೆಚ್ಚು ಅಂಕಗಳನ್ನು ನೀಡುತ್ತಾ ತಮಗೆ ಬೇಕಾದ ಅಭ್ಯರ್ಥಿಗಳು ಮೀಸಲಾತಿಯ ಲಾಭ ಇಲ್ಲದೆಯೂ ಉದ್ಯೋಗ ಪಡೆಯುವಂತೆ ಮಾಡಲಾಗುತ್ತದೆ' ಎಂದೂ ಈ ಮೂಲಗಳು ಹೇಳುತ್ತವೆ.

ಈ ಬಾರಿ 362 ಹುದ್ದೆಗಳ ನೇಮಕಾತಿಗಾಗಿ 2011ರಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಿತು. 2012ರ ಡಿಸೆಂಬರ್ ಮತ್ತು 2013ರ ಜನವರಿಯಲ್ಲಿ ಮುಖ್ಯ ಪರೀಕ್ಷೆ ನಡೆಯಿತು. ಮಾರ್ಚ್ 16ರಂದು ಫಲಿತಾಂಶ ಪ್ರಕಟಿಸಲಾಯಿತು. ಮಾರ್ಚ್ 21ರಂದು ಸಂದರ್ಶನಕ್ಕೆ ಅರ್ಹರಾದವರ ಹೆಸರು ಪ್ರಕಟಿಸಲಾಯಿತು. ಮರು ಎಣಿಕೆಗೆ ಮಾರ್ಚ್ 27 ಅಂತಿಮ ದಿನವಾಗಿತ್ತು. ಆದರೆ ಮಾರ್ಚ 24ರಂದೇ ಸಂದರ್ಶನಕ್ಕೆ ಹಾಜರಾಗುವಂತೆ 1,057 ಅಭ್ಯರ್ಥಿಗಳಿಗೆ ದೂರವಾಣಿ ಕರೆ, ಎಸ್‌ಎಂಎಸ್ ಮತ್ತು ಟೆಲಿಗ್ರಾಂ ಮೂಲಕ ತಿಳಿಸಲಾಯಿತು. ಸಂದರ್ಶನದ ಪತ್ರಗಳನ್ನು ನಂತರ ಅಂಚೆ ಮೂಲಕ ಕಳುಹಿಸಲಾಯಿತು. ಮೊದಲ ಎರಡು ದಿನ ಸಂದರ್ಶನದಲ್ಲಿ ಭಾಗಿಯಾದವರಲ್ಲಿ ಕೆಲವರಿಗೆ ಸಂದರ್ಶನದ ಪತ್ರವೇ ಕೈಸೇರಿರಲಿಲ್ಲ!

ಮಾರ್ಚ್ 20ರಿಂದ ಮೇ 8ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಏಪ್ರಿಲ್ 1 ಮತ್ತು 2ರಂದು ಸಂದರ್ಶನ ನಡೆಸಲಾಯಿತು. ಇದನ್ನು ಕೆಲವರು ಪ್ರಶ್ನೆ ಮಾಡಿದ್ದರಿಂದ ಸಂದರ್ಶನ ಮುಂದೂಡುವಂತೆ ಚುನಾವಣಾ ಆಯೋಗ ಕೆಪಿಎಸ್‌ಸಿಗೆ ಸೂಚನೆ ನೀಡಿತು. ಕೆಪಿಎಸ್‌ಸಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜೆ.ಅಮಿತ್ ಎಂಬ ಅಭ್ಯರ್ಥಿ ಸಂದರ್ಶನ ಮುಂದೂಡಿದ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದರು.

ಹೈಕೋರ್ಟ್ ಈ ಅರ್ಜಿಯನ್ನು ವಜಾ ಮಾಡಿ ಸಂದರ್ಶನ ಮುಂದೂಡಿದ್ದನ್ನು ಎತ್ತಿ ಹಿಡಿಯಿತು. ಆದರೂ ಸಂದರ್ಶನ ನಡೆಯಲೇ ಬೇಕು ಎಂದು ಪಟ್ಟಿಗೆ ಬಿದ್ದ ಡಿ.ಎಂ.ಗೀತಾ ಎಂಬ ಅಭ್ಯರ್ಥಿ ಕೆ.ಎ.ಟಿಯಲ್ಲಿ ಅರ್ಜಿ ಸಲ್ಲಿಸಿ ಸಂದರ್ಶನವನ್ನು ಮುಂದೂಡಿದ ಕ್ರಮವನ್ನು ಪ್ರಶ್ನಿಸಿದರು. ಕೆಎಟಿ ಕೂಡ ಚುನಾವಣಾ ಆಯೋಗದ ನಿರ್ಧಾರವನ್ನೇ ಎತ್ತಿ ಹಿಡಿಯಿತು.

ಮೇ 8ಕ್ಕೆ ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಯಿತು. ಆದರೆ ಮೇ 7ರಿಂದಲೇ ಮತ್ತೆ ಸಂದರ್ಶನಗಳು ಆರಂಭವಾದವು. ಮೇ 11ಕ್ಕೆ ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ ಭೀಮಪ್ಪ ಮತ್ತು ಸದಸ್ಯ ಎನ್.ರಾಮಕೃಷ್ಣ ನಿವೃತ್ತರಾದರು. ಆದರೆ ಮೇ 7ರಿಂದ ಮೇ 10ರವರೆಗೆ ಈ ಇಬ್ಬರೂ ಸಂದರ್ಶನ ನಡೆಸಿದರು. ಏಪ್ರಿಲ್ 1 ಮತ್ತು 2 ಹಾಗೂ ಮೇ ತಿಂಗಳಿನಲ್ಲಿ ನಾಲ್ಕು ದಿನ ಒಟ್ಟು 6 ದಿನ ಸಂದರ್ಶನದಲ್ಲಿ ಭಾಗಿಯಾಗಿದ್ದ ಗೋನಾಳ ಭೀಮಪ್ಪ 140 ಅಭ್ಯರ್ಥಿಗಳಿಗೆ ತಲಾ 150 ಅಂಕಗಳನ್ನು ಹಾಗೂ 60 ಅಭ್ಯರ್ಥಿಗಳಿಗೆ ತಲಾ 120 ಅಂಕಗಳನ್ನು ನೀಡಿದರು.

ಈ ಎಲ್ಲ ಪ್ರಕ್ರಿಯೆ ಹಿಂದೆ ತಮಗೆ ಬೇಕಾದವರನ್ನು `ಸಾಮಾನ್ಯ ವರ್ಗ'ಕ್ಕೆ ಸೇರಿಸುವ ಹುನ್ನಾರ ಇದೆ ಎಂಬ ಗುಮಾನಿ ಇದೆ. ಈ ಬಗ್ಗೆ ಕೂಡ ಈಗ ಸಿಐಡಿ ತನಿಖೆ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.