ADVERTISEMENT

ಸಾರೋಟು ಖರೀದಿಗೆ ಅರಮನೆ ಯತ್ನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಬೆಂಗಳೂರು: ಇಂಗ್ಲೆಂಡಿನ ಹಿಸ್ಟಾರಿಕ್ಸ್ ಕಂಪೆನಿ ಇದೇ 24ರಂದು ಬ್ರೂಕ್‌ಲ್ಯಾಂಡ್‌ನಲ್ಲಿ ಹರಾಜು ಮಾಡಲಿರುವ ಮೈಸೂರು ಮಹಾರಾಜರ ಕುದುರೆ ಸಾರೋಟಿನ ಖರೀದಿಗೆ ಯತ್ನಿಸಲು ಮೈಸೂರು ಅರಮನೆ ಮಂಡಳಿ ಉದ್ದೇಶಿಸಿದ್ದು, ರಾಜ್ಯ ಸರ್ಕಾರದಿಂದ ಅನುಮತಿ ಕೇಳಿದೆ.

ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. `ಸರ್ಕಾರಕ್ಕೆ ಯಾವುದೇ ಹೊರೆಯಾಗದಂತೆ ಅರಮನೆ ಮಂಡಳಿಯೇ ಈ ವೆಚ್ಚ ಭರಿಸಲಿದ್ದು, ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಉಪನಿರ್ದೇಶಕರ ನೇತೃತ್ವದ ತಂಡ ಕಳುಹಿಸಿಕೊಡಲು ಆಲೋಚಿಸಲಾಗಿದೆ~ ಎಂದು ತಿಳಿಸಿದರು.

ಮೈಸೂರು ಮಹಾರಾಜರ ಆಳ್ವಿಕೆ ಅವಧಿಯಲ್ಲಿದ್ದ ಸುಮಾರು 200 ವರ್ಷಗಳಷ್ಟು ಹಳೆಯದಾದ 16 ಕಿಟಕಿಗಳನ್ನು ಹೊಂದಿರುವ ಈ ಸಾರೋಟನ್ನು ಇಂಗ್ಲೆಂಡಿಗೆ ಸ್ಥಳಾಂತರಿಸಲಾಗಿತ್ತು.

ಎರಡು ಶತಮಾನ ಕಳೆದಿದ್ದರೂ ಇದು ಹೊಸದರಂತೆಯೇ ಕಂಗೊಳಿಸುತ್ತಿದೆ. ನಾಲ್ಕೂ ಕಡೆಗಳಲ್ಲಿ ಅಂದದ ಕೆತ್ತನೆ ಇದ್ದು, ಕುಸುರಿ ಕಲೆಯಲ್ಲಿ ಅರಳಿದ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ವಿಕ್ಟೋರಿಯಾ ರಾಣಿ ಮತ್ತು ವೇಲ್ಸ್ ರಾಜಕುಮಾರ ಸೇರಿದಂತೆ ಇಂಗ್ಲೆಂಡಿನ ರಾಜ ಕುಟುಂಬದ ಪ್ರಮುಖರು ಈ ಸಾರೋಟನ್ನು ಬಳಸಿದ್ದಾರೆ. 1927ರ ನಾಡಹಬ್ಬದವರೆಗೂ ಈ ರಾಜವೈಭವದ ಗಾಡಿಯನ್ನು ಮೈಸೂರಿನಲ್ಲಿ ಉಪಯೋಗಿಸಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಮೈಸೂರಿನ ಅರಮನೆ ವಸ್ತು ಸಂಗ್ರಹಾಲಯದಲ್ಲಿ ಈ ಸಾರೋಟಿನ ಅಂದದ ತೈಲಚಿತ್ರ ಈಗಲೂ ಇದೆ.

ಇಬ್ಬರಿಗೆ ಸುಖಾಸೀನ ಒದಗಿಸಬಲ್ಲ ಈ ಕುದುರೆ ಗಾಡಿಯಲ್ಲಿ ರಾಜರ ಸೇವಕರು ನಿಲ್ಲಲು ಸ್ಥಳಾವಕಾಶವನ್ನೂ ಕಲ್ಪಿಸಲಾಗಿತ್ತು. ಇಂಗ್ಲೆಂಡ್ ಮತ್ತು ಭಾರತದಿಂದ ಪಡೆದ ಸಲಕರಣೆಗಳಿಂದ ಕುಶಲಕರ್ಮಿಗಳ ತಂಡ ಈ ಸಾರೋಟನ್ನು ನಿರ್ಮಿಸಿದೆ ಎಂಬ ಮಾಹಿತಿ ಇತಿಹಾಸದ ಪುಟಗಳಿಂದ ಸಿಗುತ್ತದೆ.

`ಈ ಸಾರೋಟಿನ ಮೌಲ್ಯ ಸುಮಾರು ಲಕ್ಷ ಪೌಂಡ್ (87 ಲಕ್ಷ ರೂ) ಆಗಬಹುದು ಎಂದು ಅಂದಾಜು ಮಾಡಲಾಗಿದ್ದು, ಖರೀದಿಗೆ ರೂ 87 ಲಕ್ಷ ಆಗಬಹುದು~ ಎಂದು ರಾಮದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.