ADVERTISEMENT

ಸಾಲಮನ್ನಾಕ್ಕೆ ಕೇಂದ್ರ ಶೇ.50ರಷ್ಟು ನೆರವು ನೀಡಲಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 11:19 IST
Last Updated 17 ಜೂನ್ 2018, 11:19 IST
ನರೇಂದ್ರ ಮೋದಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸಭೆಗೂ ಮುನ್ನ ಶುಭಾಶಯ ವಿನಿಮಯ ಮಾಡಿಕೊಂಡರು.
ನರೇಂದ್ರ ಮೋದಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸಭೆಗೂ ಮುನ್ನ ಶುಭಾಶಯ ವಿನಿಮಯ ಮಾಡಿಕೊಂಡರು.   

ನವದೆಹಲಿ: ‘ರಾಜ್ಯದಲ್ಲಿನ 85 ಲಕ್ಷ ರೈತರು ಸಾಲಬಾಧೆಯಲ್ಲಿ ಸಿಲುಕಿದ್ದಾರೆ. ಬ್ಯಾಂಕ್‌ಗಳಲ್ಲಿನ ಅವರ ಸಾಲವನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ಶೇ50 ರಷ್ಟು ನೆರವು ನೀಡಬೇಕು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,‘ನಾವು ಭಿನ್ನವಾದ ರಾಜಕೀಯ ಸಿದ್ಧಾಂತಗಳನ್ನು ಅಳವಡಿಕೊಂಡಿದ್ದರೂ, ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಒಟ್ಟಾಗಿ ಸಾಗಬೇಕಿದೆ’ ಎಂದರು.

ಕುಮಾರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಮುಖ ವಿಷಯಗಳು

ADVERTISEMENT

* ರಾಜ್ಯ ಸರ್ಕಾರ ಜಾರಿಗೆ ತಂದ ‘ಕರ್ನಾಟಕ ಕೃಷಿ ಮಾರುಕಟ್ಟೆ ನೀತಿ–2013’ ದೇಶಕ್ಕೆ ಮಾದರಿಯಾಗಿದೆ. ಇದರಲ್ಲಿನ ಅಂಶಗಳನ್ನು ಕೇಂದ್ರ ಸರ್ಕಾರ ಇ–ನರ್ಮ್‌ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ.

* ಹವಾಮಾನ ಬದಲಾವಣೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬದಲಾದ ಹವಾಗುಣಕ್ಕೆ ಹೊಂದುವ ಕೃಷಿ ವಿಧಾನಗಳನ್ನು ರೈತರಿಗೆ ಪರಿಚಯಿಸಲು ಕೇಂದ್ರ ಕೈಜೋಡಿಸಬೇಕು.

* ಯಾದಗಿರಿ ಮತ್ತು ರಾಯಚೂರಿನಂತಹ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಮುಂದಿನ ಐದು ವರ್ಷಗಳ ಕಾಲ ₹ 100 ಕೋಟಿ ಅನುದಾನ ನೀಡಬೇಕು.

* ರಾಜ್ಯದಲ್ಲಿ ಪ್ರತಿವರ್ಷ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ರಾಜ್ಯಕ್ಕೆ ಹೆಚ್ಚು ಹಣಕಾಸಿನ ಹೊರೆಯಾಗುತ್ತಿದೆ. 2015–20ರ ಅವಧಿಗೆಂದು  ಕೇಂದ್ರ ಕೇವಲ ₹ 1,375 ಕೋಟಿ ಬಿಡುಗಡೆ ಮಾಡಿದೆ. ಇತರೇ ರಾಜ್ಯಗಳಿಗೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ.

* ಭವಿಷ್ಯದ ಸುಸ್ಥಿರ ಪ್ರಗತಿಗೆ ಉಪನಗರಗಳನ್ನೂ ಅಭಿವೃದ್ಧಿಪಡಿಸುವ ಅಂಶಗಳನ್ನು ಆಯೋಗದ ಉದ್ದೇಶಗಳಲ್ಲಿ ಸೇರಿಸಬೇಕು.

* ಯುವಜನರ ಕೌಶಲಾಭಿವೃದ್ಧಿ ತರಬೇತಿ ಮತ್ತು ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ಪ್ರಯತ್ನಗಳನ್ನು ದ್ವಿಗುಣಗೊಳಿಸಲು ನೆರವಾಗಬೇಕು.

* ದೇಶದಲ್ಲಿನ ಅಭಿವೃದ್ಧಿಯ ಅಸಮಾನತೆಗಳನ್ನು ನಿವಾರಿಸಲು ಒಕ್ಕೂಟ ವ್ಯವಸ್ಥೆ ನೆಲೆಯಲ್ಲಿ ನೀತಿ ಆಯೋಗ ಮತ್ತು ಕೇಂದ್ರ ಸರ್ಕಾರ ನೆರವಾಗಲಿವೆ ಎಂದು ನಂಬಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.