ADVERTISEMENT

ಸಾವಿರಾರು ಕಂಠಗಳಿಂದ ಮೊಳಗಿತು ಮಾತೆಯ ನಮನ

ಘನಶ್ಯಾಮ ಡಿ.ಎಂ.
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಬೆಂಗಳೂರಿನಲ್ಲಿ ಭಾನುವಾರ ವೇದಾಂತ ಭಾರತಿ ಆಯೋಜಿಸಿದ್ದ ‘ದಶಮಃ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ’ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮ  –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌
ಬೆಂಗಳೂರಿನಲ್ಲಿ ಭಾನುವಾರ ವೇದಾಂತ ಭಾರತಿ ಆಯೋಜಿಸಿದ್ದ ‘ದಶಮಃ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ’ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮ –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌   

ಬೆಂಗಳೂರು: ಯಡತೊರೆಮಠ ಶ್ರೀಯೋಗಾನಂದೇಶ್ವರ ಸರಸ್ವತೀ ಮಠದ ವೇದಾಂತ ಭಾರತೀ ಸಂಸ್ಥೆಯು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 'ದಶಮಃ ಸೌಂದರ್ಯಲಹರೀ ಪಾರಾಯಣೋತ್ಸವ ಮಹಾಸಮರ್ಪಣೆ' ಭಾನುವಾರ ಸಂಪನ್ನಗೊಂಡಿತು. ಪರಮಾತ್ಮನನ್ನು ದೇವಿಯ ರೂಪದಲ್ಲಿ ಸ್ತುತಿಸುವ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರೀ ಸ್ತೋತ್ರವನ್ನು ಸಾವಿರಾರು ಕಂಠಗಳು ಒಕ್ಕೊರಲಿನಿಂದ ಹಾಡಿ ಧನ್ಯರಾದರು.

ಪಾರಾಯಣೋತ್ಸವಕ್ಕೆಂದು ನಗರದ ವಿವಿಧ ಭಾಗಗಳು ಮತ್ತು ದೂರದ ಊರುಗಳಿಂದ ಸಾವಿರಾರು ಸಾಧಕರು ಬಂದಿದ್ದರು. ಮಹಿಳೆಯರ ಸಂಖ್ಯೆಯೇ ಗಣನೀಯ ಪ್ರಮಾಣದಲ್ಲಿದ್ದುದು ವಿಶೇಷ. ಬಹುತೇಕ ಮಹಿಳೆಯರು ಹಸಿರು ಬಣ್ಣದ ಸಿಲ್ಕ್ ಸೀರೆ ಉಟ್ಟಿದ್ದರು. ಉಳಿದಂತೆ ಅರಿಷಣ ಹಳದಿ, ಕುಂಕುಮ ಕೆಂಪು, ಗಾಢ ನೀಲಿ ಬಣ್ಣದ ಸೀರೆಗಳೇ ಬಹುತೇಕರ ಆಯ್ಕೆಯಾಗಿತ್ತು. ಭಜನಾ ಮಂಡಳಿ, ನಿರ್ದಿಷ್ಟ ಪ್ರದೇಶಗಳಿಂದ ಬಂದಿದ್ದ ಮಹಿಳೆಯರು ಒಂದೇ ರೀತಿಯ ಸೀರೆ ಉಟ್ಟಿದ್ದುದು ವಿಶೇಷ ಎನಿಸಿತ್ತು.

'ಅದಮ್ಯ ಚೇತನ'ದ ವತಿಯಿಂದ ಶುಚಿ-ರುಚಿಯಾದ ಸಿಹಿಯೂಟ, ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಿಹಿಪೊಂಗಲ್, ಬಿಸಿಬೇಳೆಬಾತ್ ಮತ್ತು ಮೊಸರನ್ನಗಳನ್ನು ಅಡಿಕೆತಟ್ಟೆಗಳಲ್ಲಿ ವಿತರಿಸಲಾಯಿತು. ಬಹುತೇಕರು ಪ್ರಸಾದ ಸ್ವೀಕರಿಸಿದ ನಂತರವೇ ಪಾರಾಯಣ ಮಂಟಪ ಪ್ರವೇಶಿಸಿದರು. ಮೊಬೈಲ್‌ಗಳನ್ನೇ ಕನ್ನಡಿಯಾಗಿ ಭಾವಿಸಿಕೊಂಡು ಹೆರಳು ಸರಿಪಡಿಸಿಕೊಳ್ಳುವುದು, ಕುಂಕುಮ ಇರಿಸಿಕೊಳ್ಳುವುದು ಸಾಮಾನ್ಯ ದೃಶ್ಯವಾಗಿತ್ತು. ಸೆಲ್ಫೀ ತೆಗೆದುಕೊಂಡೂ ಹಲವರು ಸಂಭ್ರಮಿಸಿದರು.

ADVERTISEMENT

ಮಗುವನ್ನು ಕರೆತಂದಿದ್ದ ಕೆಲವು ಮಹಿಳೆಯರು ಮಕ್ಕಳನ್ನು ಪತಿಯ ಸುಪರ್ದಿಗೆ ಒಪ್ಪಿಸಿ ಪಾರಾಯಣಕ್ಕೆ ತೆರಳಿದರು. 'ನೀನು ಹೋಗಿ ಬಾ, ಮಗುವನ್ನು ನಾನು ಸುಧಾರಿಸ್ತೀನಿ. ಬಸ್ಸಿನ ಹತ್ರ ಇರ್ತೀನಿ. ಅಲ್ಲಿಗೇ ಬಂದುಬಿಡು' ಎಂದು ಪತಿರಾಯನೊಬ್ಬ ಪತ್ನಿಯನ್ನು ಬೀಳ್ಕೊಟ್ಟಿದ್ದು ಕಂಡುಬಂತು.

ಪಾರಾಯಣಕ್ಕೆ ಬಂದಿದ್ದ ಬಹುತೇಕರು ಸಡಿಲ ಹೆರಳು ಹಾಕಿ ಮಲ್ಲಿಗೆ ಮುಡಿದಿದ್ದರು. ಮಾಗಿದ ಅನುಭವ ಬಿಂಬಿಸುವಂತಿದ್ದ ಕೆಲ ಹಿರಿಯರ ಬಿಳಿಗೂದಲಿನಲ್ಲಿ ಕನಕಾಂಬರ ನಗುತ್ತಿತ್ತು. ಉಳಿದಂತೆ ನೀಲಿ ಸ್ಫಟಿಕದ ದಂಡೆ, ಹಳದಿ ಸೇವಂತಿಯೂ ಕೆಲವರ ತಲೆ ಏರಿ ನಗುತ್ತಿತ್ತು.

ವೇದಾಂತ ಭಾರತೀ ಸಂಸ್ಥೆಯ ತತ್ವಶಾಸ್ತ್ರದ ಪುಸ್ತಕಗಳನ್ನು ಆಸಕ್ತರು ಖರೀದಿಸುತ್ತಿದ್ದುದು ಕಂಡುಬಂತು. ಮಳಿಗೆಯಲ್ಲಿದ್ದವರು ಆಸಕ್ತರಿಗೆ ಆಸ್ಥೆಯಿಂದ ಶಾಸ್ತ್ರಗ್ರಂಥಗಳ ಪ್ರಾಮುಖ್ಯವನ್ನು ವಿವರಿಸುತ್ತಿದ್ದರು.

ಆಹಾರ ವಿತರಣೆ, ಬಳಸಿದ ಅಡಿಕೆ ತಟ್ಟೆ ಮತ್ತು ಚಮಚಗಳ ಸಂಗ್ರಹ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಅಚ್ವುಕಟ್ಟಾಗಿತ್ತು. ಚಪ್ಪಲಿ ಇರಿಸಲು ಎರಡು ದೊಡ್ಡ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಊಟಕ್ಕೆ ಬಳಸಿದ ಅಡಿಕೆತಟ್ಟೆಗಳನ್ನು ವ್ಯರ್ಥವಾಗಿ ಬಿಸಾಕದೆ ಅವನ್ನು ಬಯೋಗ್ಯಾಸ್‌ನ ಉತ್ಪಾದನೆಗೆ ಬಳಸಲಾಗುತ್ತದೆ ಎಂದು ಹೆಮ್ಮೆಯಿಂದ ಮಾಹಿತಿ ಕೊಟ್ಟರು ಅದಮ್ಯ ಚೇತನದ ಸದಸ್ಯೆ ನಮ್ರತಾ ನಾಯಕ್‌.

ಮೋದಿ ಬಂದ್ರು, ಮೋದಿ ಬಂದ್ರು

'ಪ್ರಧಾನಿ ಬಂದಾಗ 'ಭಜಗುರು ಶರಣಂ' ಘೋಷದೊಂದಿಗೆ ಸ್ವಾಗತಿಸಬೇಕು' ಎಂದು ಆಯೋಜಕರು ಪದೇಪದೇ ವಿನಂತಿಸಿದ್ದರು. ಆದರೆ ಮೋದಿ ವೇದಿಕೆ ಏರಿದಾಗ 'ನರೇಂದ್ರ ಮೋದಿ ಕೀ ಜೈ', 'ಭಾರತ್‌ ಮಾತಾ ಕೀ ಜೈ' ಘೋಷಣೆಗಳು ಮೊದಲ ಮೊಳಗಿದವು. ನಂತರ 'ಭಜಗುರು ಶರಣಂ' ಇತ್ಯಾದಿ ಘೋಷಗಳು ಕೇಳಿ ಬಂದವು.

'ನವರಾತ್ರಿ ವ್ರತ ಮಾಡುವ ನಾನು ಒಂದು ದಿನ ಸೌಂದರ್ಯಲಹರೀ ಪಾರಾಯಣ ಮಾಡ್ತೀನಿ' ಎಂದು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಿದಾಗ ಸಾಧಕರು ಚಪ್ಪಾಳೆ ತಟ್ಟಿ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.