ಮಡಿಕೇರಿ: ಭೂರಮೆಯ ದೇವಸನ್ನಿಧಿ, ಕಳೆಕಳೆ ಹೊಳೆವ ಕಾವೇರಿ ಮಡಿಲು, ಮೋಹನ ಗಿರಿಯ ಬೆರಗಿನ ರೂಪ, ಕಾನನದ ಮಧ್ಯೆ ಕಂಗೊಳಿಸುವ ಮಡಿಕೇರಿ, ಈಗ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡು ನಳನಳಿಸುತ್ತಿದೆ.
ಅಕ್ಷರ ಹಬ್ಬಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬರುವ ಅತಿಥಿಗಳನ್ನು ಸ್ವಾಗತಿಸಲು ಸಜ್ಜಾಗಿ ನಿಂತಿದೆ. ಪುಟ್ಟ ಪುಟ್ಟ ಗಲ್ಲಿಗಳೇ ತುಂಬಿರುವ ಈ ಊರು ಅಕ್ಕಪಕ್ಕದ ಗುಡ್ಡಗಳಲ್ಲಿಯೂ ಮನೆಗಳನ್ನು ಹೊತ್ತು ನಿಂತಿದೆ. ಮಡಿಕೇರಿ ಮಂಜು ಮತ್ತು ಚಳಿಗೆ ಹೆದರಿ ಬರುವ ಜನರಿಗೆ ಇಲ್ಲಿನ ಮಂದಿ ತಮ್ಮ ಹೃದಯ ಬಿಚ್ಚಿ ಬೆಚ್ಚನೆಯ ಅನುಭವ ನೀಡುತ್ತಿದ್ದಾರೆ.
1981ರ 54ನೇ ಸಾಹಿತ್ಯ ಸಮ್ಮೇಳನವು ಕೊಡಗಿನಲ್ಲಿ ನಡೆದಿತ್ತು. 32 ವರ್ಷಗಳ ನಂತರ ಮೂರನೇ ಬಾರಿಗೆ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಮಡಿಕೇರಿ ವಹಿಸಿಕೊಂಡಿದೆ. ಸಮ್ಮೇಳನ ಯಶಸ್ವಿಗೊಳಿಸಲು ಸಾವಿರಾರು ಸ್ವಯಂಸೇವಕರು ಟೊಂಕಕಟ್ಟಿ ನಿಂತಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿಸ್ತಾರವಾದ ಮೈದಾನದಲ್ಲಿ ಭಾರತೀಸುತ ಪ್ರಧಾನ ವೇದಿಕೆ ಹಾಗೂ ಐ.ಮಾ. ಮುತ್ತಣ್ಣ ಮಹಾಮಂಟಪ ನಿರ್ಮಾಣಗೊಂಡಿದೆ. ಮಹಾದ್ವಾರಗಳಲ್ಲಿ ಕೊಡಗಿನ ಸೌಂದರ್ಯ ತಾಣಗಳನ್ನು ಚಿತ್ರೀಕರಿಸಿರುವ ಕಟೌಟ್‌ಗಳನ್ನು ಹಾಕಲಾಗಿದೆ. ಇವುಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಕವಿಗಳ ಸಾಲುಗಳು ಆಕರ್ಷಣೀಯವಾಗಿವೆ.
ಸುಮಾರು 20 ಸಾವಿರದಷ್ಟು ಜನರಿಗೆ ಅವಕಾಶ ಕಲ್ಪಿಸುವಷ್ಟು ವಿಸ್ತಾರವಾಗಿ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. ಅತಿಗಣ್ಯ ವ್ಯಕ್ತಿಗಳಿಗೆ, ಆಹ್ವಾನಿತರಿಗೆ ಒಂದು ಸಾವಿರದಷ್ಟು ವಿಶೇಷ ಆಸನಗಳನ್ನು ಕಾಯ್ದಿರಿಸಲಾಗಿದೆ. ಸಭಾಂಗಣ ನಿರ್ಮಿಸಲು ಬಳಸಲಾಗಿರುವ ಕೆಂಪು ಹಾಗೂ ಹಳದಿ ಬಣ್ಣದ ಬಟ್ಟೆ ವೇದಿಕೆಗೆ ಮೆರುಗು ತಂದಿದೆ. ಲೈಟಿಂಗ್, ಸೌಂಡ್ ಎಫೆಕ್ಟ್ ಹಾಗೂ ಎಲ್‌ಸಿಡಿ ಪರದೆಗಳನ್ನು ಹಾಕಲಾಗಿದೆ.
ಇದರ ಪಕ್ಕದ ಕಾಲೇಜಿನ ಸಭಾಂಗಣದಲ್ಲಿ ಸಮಾನಾಂತರ ವೇದಿಕೆ ಸಿದ್ಧಪಡಿಸಲಾಗಿದೆ. ಇಲ್ಲಿಯೂ ಕೂಡ ಮೂರು ದಿನಗಳ ಕಾಲ ನಿರಂತವಾಗಿ ವಿಚಾರಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವೇದಿಕೆಗೆ ಸಂಪರ್ಕ ಕಲ್ಪಿಸುವ ಎಂಟು ರಸ್ತೆಗಳಲ್ಲಿ ಮಹನೀಯರ ಹೆಸರಿನಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.
80 ಕಲಾತಂಡಗಳು: ನಗರದ ಗಾಂಧಿ ಮೈದಾನದಿಂದ ಬೆಳಿಗ್ಗೆ 9ಗಂಟೆಗೆ ಆರಂಭಗೊಳ್ಳುವ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಮೆರವಣಿಗೆಯಲ್ಲಿ 80 ಕಲಾತಂಡಗಳು, ಸ್ತಬ್ಧಚಿತ್ರಗಳು, ಪಾಲ್ಗೊಳ್ಳಲಿವೆ. ಸುಮಾರು 10,000 ಜನ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿನಿಧಿಗಳಿಗೆ ವಿಶೇಷ ಆತಿಥ್ಯ: ಸಮ್ಮೇಳನಕ್ಕೆ ಆಗಮಿಸಲು ಈಗಾಗಲೇ 8,500 ಜನ ಪ್ರತಿನಿಧಿಗಳು ಹೆಸರು
ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಲೇಖನ ಸಾಮಗ್ರಿಗಳ ಜೊತೆ ಬ್ಯಾಡ್ಜ್ ಹಾಗೂ ಊಟದ ಕೂಪನ್ಗಳನ್ನು ನೀಡಲು ವ್ಯವಸ್ಥೆಯಾಗಿದೆ.
ವಸತಿ ವ್ಯವಸ್ಥೆ: ವಿಶೇಷ ಆಹ್ವಾನಿತರು, ಅತಿಥಿಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸುವರಿಗೆ ಹಾಗೂ ಪ್ರತಿನಿಧಿಗಳಿಗೆ ಮೂರು ದಿನಗಳ ಕಾಲ ತಂಗಲು ಹೋಟೆಲ್, ಲಾಡ್ಜ್ ಹಾಗೂ ಹೋಂಸ್ಟೇಗಳನ್ನು ವ್ಯವಸ್ಥೆ ಮಾಡಲಾಗಿದೆ. ಸುಮಾರು 10,000 ಜನರಿಗೆ ವ್ಯವಸ್ಥೆ ಮಾಡಲಾಗಿದೆ.
ಮಳಿಗೆಗಳು:ಮುಖ್ಯ ವೇದಿಕೆಯ ಪಕ್ಕದಲ್ಲಿ ಸುಮಾರು 400ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ಇದರಲ್ಲಿ ಕಲಾಕೃತಿಗಳ ಪ್ರದರ್ಶನವೂ ನಡೆಯಲಿದೆ. ರಾಜ್ಯದ ಪ್ರಮುಖ ಪ್ರಕಾಶಕರು ಮಳಿಗೆಗಳನ್ನು ತೆರೆದಿದ್ದಾರೆ. ವ್ಯಾಪಾರಿ ಉದ್ದೇಶದ 40 ಮಳಿಗೆಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಜಿಲ್ಲಾ ಕಸಾಪ ಘಟಕಕ್ಕೆ ಮಳಿಗೆ ತೆರೆಯಲಾಗಿದೆ.
ಪೊಲೀಸ್ ಬಂದೋಬಸ್ತ್: ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ ಸೇರಿದಂತೆ ಸ್ಥಳೀಯ ಪೊಲೀಸರು ಸೂಕ್ತ ಬಂದೋಬಸ್ತ್‌ಗೆ ಟೊಂಕಕಟ್ಟಿ ನಿಂತಿದ್ದಾರೆ. 1,100 ಸಿಬ್ಬಂದಿ, 400 ಗೃಹರಕ್ಷಕ ದಳ, 200– ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 2,000 ಪೊಲೀಸರನ್ನು ನಿಯೋಜಿಸಲಾಗಿದೆ.
ಏಕಮುಖ ಸಂಚಾರ: ಮಡಿಕೇರಿ ನಗರವು ಬೆಟ್ಟಗುಡ್ಡ ಪ್ರದೇಶವಾದುದರಿಂದ ಇಲ್ಲಿನ ರಸ್ತೆಗಳು ಚಿಕ್ಕದಾಗಿವೆ. ಈ ಕಾರಣದಿಂದ ವಾಹನಗಳ ಸಂಚಾರವನ್ನು ನಿಯಂತ್ರಿಸಲು ನಗರದೆಲ್ಲೆಡೆ ಏಕಮುಖ ಸಂಚಾರವನ್ನು ಮಾಡಲಾಗಿದೆ. ಸಮ್ಮೇಳನ ನಡೆಯುವ ಮೂರು ದಿನಗಳ ಸಮಯದಲ್ಲಿ ಭಾರಿ ವಾಹನಗಳಿಗೆ ಹಗಲುಹೊತ್ತು ಪ್ರವೇಶ ನಿಷೇಧಿಸಲಾಗಿದೆ.
ನಗರದ ವಿವಿಧ ಭಾಗಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಸಾಗಿಸಲು ಆರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ. ಇದರಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಸಹೋದರ ಭಾಷೆಗಳಾದ ಕೊಡವ, ಅರೆಭಾಷೆ, ತುಳು ಜೊತೆ ತನ್ನತನವನ್ನು ಉಳಿಸಿಕೊಂಡು ಬಂದಿರುವ ಕನ್ನಡಕ್ಕೆ ಈ ಸಮ್ಮೇಳನ ಇನ್ನಷ್ಟು ಬಲತುಂಬಲಿ ಎನ್ನುವ ಸದಾಶಯ ಕನ್ನಡಿಗರದ್ದು.
ಈ ಮೊದಲು ಪ್ರತ್ಯೇಕ ರಾಜ್ಯದ ಸ್ಥಾನಮಾನ ಹೊಂದಿದ್ದ ಕೊಡಗು 1956ರಲ್ಲಿಯೇ ಕರ್ನಾಟಕದಲ್ಲಿ ವಿಲೀನಗೊಂಡಿತು. ನಂತರದ ದಿನಗಳಲ್ಲಿ ಕರ್ನಾಟಕ ಸರ್ಕಾರವು ಜಿಲ್ಲೆಯ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿದೆ ಎನ್ನುವ ಭಾವನೆ ಸ್ಥಳೀಯರಲ್ಲಿ ಮನೆಮಾಡಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಭೂ ಪದ್ಧತಿ, ಜೀವನ ಶೈಲಿ, ಭಾಷೆಯ ಸಾಮರಸ್ಯ ಎಲ್ಲವೂ ಭಿನ್ನವಾಗಿದೆ. ಇವುಗಳಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಸಮ್ಮೇಳನದ ಮೂಲಕ ಸಂದೇಶ ರವಾನಿಸಬೇಕು ಎನ್ನುವ ಅಭಿಲಾಷೆ ಸ್ಥಳೀಯರಲ್ಲಿದೆ.
600 ಬಾಣಸಿಗರು!: ಸಾಹಿತ್ಯ ಜಾತ್ರೆಗೆ ಬರುವ ಪ್ರತಿನಿಧಿಗಳಿಗೆ ರುಚಿಯಾದ ಊಟ ಬಡಿಸಲು 600 ಬಾಣಸಿಗರು ಸಿದ್ಧರಾಗಿದ್ದಾರೆ.
ಕೊಡಗಿನ ವಿಶಿಷ್ಟ ಖಾದ್ಯಗಳಾದ ಕಡಂಬುಟ್ಟು (ಕಡಬು) ಚಟ್ನಿ, ಅಕ್ಕಿ ಪಾಯಸ, ಅಕ್ಕಿರೊಟ್ಟಿಯ ಸ್ವಾದ ಸಾಹಿತ್ಯಾಸಕ್ತರಿಗೆ ಲಭ್ಯವಾಗಲಿದೆ. ಕೊಡಗಿನ ಆಹಾರದ ಜೊತೆ ಉತ್ತರ ಕರ್ನಾಟಕದ ಜೋಳದರೊಟ್ಟಿ, ಬದನೆ ಎಣ್ಣೆಗಾಯಿ, ಮೆಣಸು, ಖಾರ ಕೆಂಪು ಚಟ್ನಿಗೂ ಅವಕಾಶ ದೊರೆತಿದೆ.
2,000ಕ್ಕೂ ಹೆಚ್ಚು ಸ್ವಯಂ ಸೇವಕರು, 10 ಉಪಸಮಿತಿಗಳು ಹಾಗೂ 250ಕ್ಕೂ ಹೆಚ್ಚು ಸಕ್ರಿಯ ಸದಸ್ಯರು ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ ಎಂದು ಆಹಾರ ಸಮಿತಿಯ ಸಂಚಾಲಕ ಕೇಶವ ಕಾಮತ್ ಹೇಳಿದರು.
ಅಡುಗೆ ತಯಾರಿಸಿಕೊಡುವ ಟೆಂಡರ್ ಹುಬ್ಬಳ್ಳಿಯ ಬೈರು ಕ್ಯಾಟರರ್ಸ್ ತಂಡಕ್ಕೆ ಲಭಿಸಿದೆ. ಈ ತಂಡವು ಇದಕ್ಕೂ ಮುಂಚೆ ಗಂಗಾವತಿಯಲ್ಲಿ ನಡೆದ 78ನೇ ಸಮ್ಮೇಳನ ಹಾಗೂ ವಿಜಾಪುರದಲ್ಲಿ ನಡೆದ 79ನೇ ಸಮ್ಮೇಳನದಲ್ಲೂ ಊಟೋಪಚಾರದ ವ್ಯವಸ್ಥೆಯನ್ನು ವಹಿಸಿಕೊಂಡಿತ್ತು.
ಸಮ್ಮೇಳನದಲ್ಲಿ ಆಗಮಿಸುವವರಿಗೆ ಬೆಳಗಿನ ಉಪಾಹಾರ, ಟೀ/ಕಾಫಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಸಾಹಿತ್ಯ ಪರಿಷತ್ತು ಮಾಡಿದೆ. ಮುಖ್ಯ ವೇದಿಕೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಕೂಪನ್ ಹೊಂದಿರುವ ಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಊಟ ಬಡಿಸಲು ಸ್ವಯಂ ಸೇವಕರ ತಂಡವು ಸಿದ್ಧವಾಗಿದೆ. ಕುಡಿಯಲು ಮಿನರಲ್ ವಾಟರ್ ನೀಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವುದರಿಂದ ಅಡಿಕೆ ಹಾಳೆಯ ಊಟದ ತಟ್ಟೆಗಳು ಹಾಗೂ ಪೇಪರ್ ಲೋಟಗಳನ್ನು ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.