ADVERTISEMENT

ಸಿಂಗಪುರ ಅಲ್ಲ, ಕೊಳಕುಪುರ ಆಗ್ತೈತಿ...

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಬೆಂಗಳೂರು: `ಬೆಂಗ್ಳೂರನ್ನ ಸಿಂಗಪುರ ಮಾಡ್ತೇವೆ ಅಂತ ದೊಡ್ಡ ದೊಡ್ಡ ಭಾಷಣ ಬಿಗಿತಾರೆ. ಒಂದ್ ದಿನ ನಾವೆಲ್ಲ ಕೆಲ್ಸ ಮಾಡ್ದೆ ಸುಮ್ನೆ ಇದ್ರೆ ಸಿಂಗಪುರ ಅಲ್ಲ, ಇಡೀ ನಗರ ಕಸದಪುರ, ಕೊಳಕುಪುರ ಆಗ್ತೈತಿ..~

`ಬ್ಯಾರೆ ಬ್ಯಾರೆ ದೇಶದ ದೊಡ್ ದೊಡ್ ಮಿನಿಸ್ಟರುಗಳನ್ನ ಕರ‌್ಕೊಬಂದು `ನೋಡಿ ಬೆಂಗ್ಳೂರು ಎಷ್ಟ್ ಚೆನ್ನಾಗಿದೆ, ರೋಡ್ ನೋಡಿ ಎಷ್ಟು ಶುಚಿಯಾಗಿದೆ~ ಅಂತ ಬೀಗಿ ತಮ್ ಬೇಳೆ ಬೇಸ್ಕೊತಾವ್ರೆ. ನಾವ್ ಮಾಡೋ ಕೆಲ್ಸಕ್ಕೆ ಸರ‌್ಯಾದ ವೇತನ ಕೊಡಿ ಅಂದ್ರೆ ಕಣ್‌ಮುಚ್ಚಿ ಕುಳಿತವ್ರೆ...~

`ಇವ್ರ ಇರೋದ್ರಿಂದ ಈ ರಾಜ್ಯ ಶುಚಿ ಆಗಿರೋದು, ಇವ್ರ ನಮ್ ಆರೋಗ್ಯ ಕಾಪಾಡೋ ದೇವ್ರ... ಅಂತೆಲ್ಲ ವೇದಿಕೆ ಮ್ಯಾಗೆ ರಾಜಕಾರಣಿಗಳು ಹಾಡಿ ಹೊಗಳ್ತಾರೆ. ಒಂದ್ ದಿನ ಆದ್ರೂ ನಮ್ ಆರೋಗ್ಯದ ಕಡೆ ಗಮ್ನ ಹರಿಸಿದಾರಾ ಇವ್ರ, ಒಂದ್ ವಾರ ಕೆಲ್ಸ ಮಾಡ್ದೆ ಸುಮ್‌ನಿದ್ರೆ ಸಿ.ಎಂ, ಪಿ.ಎಂ, ಮಿನಿಸ್ಟ್ರು ಎಲ್ಲರೂ ನಮ್‌ತಾವಾನೇ ಓಡೋಡಿ ಬರ‌್ತಾರೆ. ನಮ್ಮಿಂದನೇ ಅವ್ರ ವಿನಾ, ಅವ್ರಿಂದ ನಾವಲ್ಲ...~

- ಹೀಗೆ ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು ಪೌರಕಾರ್ಮಿಕರು.

ತಮ್ಮ ಬೇಡಿಕೆ ಈಡೇರಿಸದೇ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ, ತಮ್ಮ ಆರೋಗ್ಯದ ಕಡೆಗೆ ದಿವ್ಯ ನಿರ್ಲಕ್ಷ್ಯ ಹರಿಸಿ ತಮ್ಮನ್ನು ಸರ್ಕಾರ ಬೀದಿಪಾಲು ಮಾಡುತ್ತಿದೆ ಎಂಬ ಆಕ್ರೋಶವನ್ನು ನಗರದಲ್ಲಿ ಭಾನುವಾರ, `ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಒಕ್ಕೂಟ~ ಆಯೋಜಿಸಿದ್ದ ರಾಜ್ಯಮಟ್ಟದ ಪೌರಕಾರ್ಮಿಕರ ಸಮಾವೇಶದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ ಕಾರ್ಮಿಕರು ವ್ಯಕ್ತಪಡಿಸಿದರು.

ಆದೇಶ ಬೇಡ, ಕಾರ್ಯ ಆಗಲಿ: ಕಾನೂನು ಸಚಿವ ಎಸ್. ಸುರೇಶಕುಮಾರ್ ಮಾತನಾಡಿ, `ಈಗ ಪೌರಕಾರ್ಮಿಕರ ತಿಂಗಳ ಸಂಬಳವನ್ನು ರೂ 2,300ಗಳಿಂದ ರೂ 6,600 ಗಳಿಗೆ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ. ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ 4 ಸಾವಿರ ಕಾರ್ಮಿಕರನ್ನು ಕಾಯಂ ಮಾಡಲು ಸರ್ಕಾರ ಸಿದ್ಧವಿದೆ.
 
ಕಾರ್ಮಿಕರಿಗೆ ನೀಡುತ್ತಿರುವ ಹಣ ಮಧ್ಯವರ್ತಿಗಳ ಪಾಲಾಗದಂತೆ ತಡೆಯುವ ಸಂಬಂಧ ಸಮಿತಿಯನ್ನು ರಚಿಸಲಾಗುವುದು. ಕಾರ್ಮಿಕರ ರಾಜ್ಯ ವಿಮೆ, ಭವಿಷ್ಯ ನಿಧಿ ನೀಡಿಕೆ ಸೇರಿದಂತೆ ಉಳಿದ ಬೇಡಿಕೆಗಳ ಈಡೇರಿಕೆಗೂ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಲಿದೆ~ ಎಂದು ಭರವಸೆ ನೀಡಿದರು.

`ನೀವೆಲ್ಲ, ನಮ್ಮ ಆರೋಗ್ಯ ಕಾಪಾಡುವ ವೈದ್ಯರಿಗಿಂತ ದೊಡ್ಡವರು~ ಎಂದು ಹೊಗಳಿ ತುರ್ತು ಕೆಲಸದ ನಿಮಿತ್ತ ಸಚಿವರು ಕಾರ್ಯಕ್ರಮದಿಂದ ತೆರಳಿದರು.

ಸಚಿವರ ಈ ಭರವಸೆಯ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ವಿವಿಧ ಪೌರ ಕಾರ್ಮಿಕರು, `ನಮಗೆ ಕಾಗದದಲ್ಲಿ ಉಳಿಯುವ ಆದೇಶ ಬೇಡ. ಇಂತಹ ಆದೇಶಗಳು ಹಿಂದೆ ಕೂಡ ಹಲವಾರು ಬಾರಿ ಆಗಿವೆ. ಆದರೆ, ಇದುವರೆಗೂ ಜಾರಿಗೆ ಬಂದಿಲ್ಲ. ಕನಿಷ್ಠ ವೇತನ ನೀಡಬೇಕು ಎಂದು 1948ರಲ್ಲಿ ಜಾರಿಗೆ ಬಂದಿರುವ ಕಾಯ್ದೆಯಲ್ಲಿಯೇ ಉಲ್ಲೇಖಗೊಂಡಿದೆ. ಅದನ್ನು ಅನುಷ್ಠಾನ ಮಾಡಿ ಎಂದಷ್ಟೇ ನಾವು ಹೇಳುತ್ತಿರುವುದು~ ಎಂದು ಅಸಹನೆ ವ್ಯಕ್ತಪಡಿಸಿದರು.

ಸಿಐಟಿಯು ಮುಖಂಡರಾದ ಎಸ್. ಪ್ರಸನ್ನಕುಮಾರ್, ಉಮೇಶ್ ಸೇರಿದಂತೆ ಇತರರು ಮಾತನಾಡಿ, `ನಮಗೆ ನೀಡುವ ಅತ್ಯಲ್ಪ ಸಂಬಳ ಗುತ್ತಿಗೆದಾರರ ಪಾಲಾಗುತ್ತಿದೆ. ಬಳ್ಳಾರಿಯ ಬಿಜೆಪಿ ಶಾಸಕ ಸೇರಿದಂತೆ ಹಲವು ರಾಜಕೀಯ ಧುರೀಣರು ನಮ್ಮ ಕೂಲಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. 100 ಮಂದಿ ಪೌರಕಾರ್ಮಿಕರು ಬೇಕಾಗುವ ಕಡೆಗಳಲ್ಲಿ ಈ ಗುತ್ತಿಗೆದಾರರು 50 ಮಂದಿಯನ್ನು ನೇಮಕ ಮಾಡಿ ಉಳಿದ 50 ಜನರ ಹಣವನ್ನು ಬೋಗಸ್ ಸಹಿ ಮೂಲಕ ಗುಳುಂ ಮಾಡುತ್ತಿದ್ದಾರೆ. 

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಡವರಿಗೆ 2 ರೂಪಾಯಿಗೆ ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಲಾಗಿತ್ತು. ಸರ್ಕಾರ ನಾಲ್ಕು ವರ್ಷ ಪೂರೈಸಿದೆ. ಇದುವರೆಗೂ ಆಶ್ವಾಸನೆ ಆಶ್ವಾಸನೆಯಾಗಿಯೇ ಉಳಿದಿದೆ~ ಎಂದು ನೋವು ತೋಡಿಕೊಂಡರು.

ಪುನಃ ಹೋರಾಟ: ಎಚ್ಚರಿಕೆ

ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ನೀಡಿರುವ ಭರವಸೆ ಜಾರಿಯಾಗದೇ ಹೋದಲ್ಲಿ ಪುನಃ ಹೋರಾಟದ ಹಾದಿ ಹಿಡಿಯುವುದಾಗಿ ಪೌರ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.

`ಪೌರ ಕಾರ್ಮಿಕರ ಒಕ್ಕೂಟದ ಜೊತೆ ಮುಂದಿನ ವಾರ ಮಾತುಕತೆ ನಡೆಸುವುದಾಗಿ ಸರ್ಕಾರ ತಿಳಿಸಿದೆ. ಅಲ್ಲಿ ತೆಗೆದುಕೊಳ್ಳುವ ತೀರ್ಮಾನದ ಆಧಾರದ ಮೇಲೆ ನಾವು ಮುಂದಿನ ಹೆಜ್ಜೆ ಇಡುತ್ತೇವೆ. ನಮ್ಮ ಮನವಿಗಳಿಗೆ ಸರ್ಕಾರ ಕಿವಿಗೊಡದಿದ್ದರೆ ಶುಚಿ ಕಾರ್ಯವನ್ನು ಸ್ಥಗಿತಗೊಳಿಸಿ ಹೋರಾಟ ನಡೆಸುತ್ತೇವೆ~ ಎಂದು ಸಮಾವೇಶದಲ್ಲಿ ಕಾರ್ಮಿಕ ಮುಖಂಡರು ಹೇಳಿದರು.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.