ADVERTISEMENT

ಸಿಇಟಿ: ಒಎಂಆರ್‌ ಪತ್ರಿಕೆಯಲ್ಲಿ ಮಾರ್ಪಾಡು

ಸುರೇಖಾ ಹೆಗಡೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಸಿಇಟಿ: ಒಎಂಆರ್‌ ಪತ್ರಿಕೆಯಲ್ಲಿ ಮಾರ್ಪಾಡು
ಸಿಇಟಿ: ಒಎಂಆರ್‌ ಪತ್ರಿಕೆಯಲ್ಲಿ ಮಾರ್ಪಾಡು   

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಏಪ್ರಿಲ್‌ 18 ಮತ್ತು 19ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಬಾರಿ ಅಭ್ಯರ್ಥಿಗಳ ವಿವರಗಳನ್ನು ಮುದ್ರಿಸಿರುವ (ಪ್ರಿ–ಪ್ರಿಂಟೆಡ್‌) ಒಎಂಆರ್‌ ಪತ್ರಿಕೆ ನೀಡಲು ನಿರ್ಧರಿಸಲಾಗಿದೆ.

‘ಪರೀಕ್ಷೆ ಬರೆಯುವ ಆತಂಕದಲ್ಲಿರುವ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ನಮೂದಿಸಬೇಕಾದ ಕೆಲ ಮಾಹಿತಿಗಳನ್ನು ತಪ್ಪಾಗಿ ಬರೆಯುತ್ತಾರೆ. ಇದನ್ನು ತಪ್ಪಿಸಲು ವಿದ್ಯಾರ್ಥಿಗಳ ಹೆಸರು, ಕ್ರಮಸಂಖ್ಯೆ, ಪ್ರಶ್ನೆ ಪತ್ರಿಕೆ ಸಂಖ್ಯೆ ಎಲ್ಲವೂ ನಮೂದಾಗಿರುವ ಒಎಂಆರ್‌ ಪತ್ರಿಕೆಯನ್ನು ಈ ಬಾರಿ ನೀಡಲಾಗುವುದು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಗಂಗಾಧರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಎಲ್ಲಾ ವಿವರಗಳು ಮುದ್ರಿತವಾಗಿರುವುದರಿಂದ ಅಭ್ಯರ್ಥಿಗಳಿಗೆ ಸಮಯ ಉಳಿತಾಯವಾಗುತ್ತದೆ. ಪರೀಕ್ಷಾ ಅಕ್ರಮ ತಡೆಯುವುದಕ್ಕೂ ಇದು ಸಹಕಾರಿ. ಇದು ಮೊದಲ ಪ್ರಯೋಗ. ಪ್ರತಿಕ್ರಿಯೆ ನೋಡಿ ಮುಂದಿನ ವರ್ಷಗಳಲ್ಲಿ ಈ ಪ್ರಕ್ರಿಯೆಯಲ್ಲಿ ಇನ್ನಷ್ಟು ಸುಧಾರಣೆ ತರಲಿದ್ದೇವೆ. ಇಲ್ಲವಾದರೆ ಮತ್ತೆ ಹಳೆಯ ಪ್ರಕ್ರಿಯೆಯನ್ನೇ ಅಳವಡಿಸಿಕೊಳ್ಳುತ್ತೇವೆ’ ಎಂದು ಅವರು ವಿವರಿಸಿದರು.

‘ನೂತನ ಮಾದರಿಯ ಒಎಂಆರ್‌ ಪತ್ರಿಕೆಯನ್ನು ವಿತರಿಸುವ ವಿಧಾನದ ಬಗ್ಗೆಯೂ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದ್ದೇವೆ. ಹೊಸ ವ್ಯವಸ್ಥೆಯಿಂದಾಗಿ ಗೊಂದಲ ಎದುರಾಗುವ ಸಾಧ್ಯತೆ ಕಡಿಮೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಸಿಇಟಿ ಫಲಿತಾಂಶವನ್ನು ಮೇ ತಿಂಗಳ ಅಂತ್ಯದಲ್ಲಿ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜೂನ್‌ ಮೊದಲ ವಾರದಲ್ಲಿ ಕೌನ್ಸೆಲಿಂಗ್‌ ಪ್ರಾರಂಭವಾಗುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.

**

ಕೃಷಿ ಕೋಟಾ

ಬಿಎಸ್ಸಿ ಅಗ್ರಿ (ಕೃಷಿ) ಹಾಗೂ ತತ್ಸಮಾನ ಪದವಿಗಳಲ್ಲಿನ ಪ್ರವೇಶಾತಿ ಪಡೆಯಲು ಕೃಷಿ ಹಾಗೂ ಕೃಷಿ ಅವಲಂಬಿತ ಪೋಷಕರ ಮಕ್ಕಳಿಗೆ ಶೇ 40ರಷ್ಟು ಮೀಸಲಾತಿ ನೀಡಬೇಕು ಎಂಬ ಸರ್ಕಾರದ ಆದೇಶ ಇದೆ. ಈ ಕೋಟಾ ಅಡಿಯಲ್ಲಿ ಈ ಬಾರಿ 83,289 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ 16 ಕೇಂದ್ರಗಳಲ್ಲಿ ಕೃಷಿ ಪ್ರಾಯೋಗಿಕ (ಪ್ರಾಕ್ಟಿಕಲ್‌) ಪರೀಕ್ಷೆ ನಡೆಯಲಿದೆ.

**

ಭಯ ಬೇಡ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ಅನೇಕ ಅಭ್ಯರ್ಥಿಗಳ ಫೋಟೊ ಅಪ್‌ಲೋಡ್‌ ಆಗಿಲ್ಲ. ಕೆಲವರಿಗೆ ಹಣ ಪಾವತಿಯ ಬಗ್ಗೆ ದೃಢೀಕರಣ ಸಿಕ್ಕಿಲ್ಲ. ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆಯೋ, ಇಲ್ಲವೋ ಎಂದು ಆತಂಕದಲ್ಲಿರುವ ಇಂತಹ ಕೆಲವು ಅಭ್ಯರ್ಥಿಗಳು ಸೋಮವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಗೆ ದೌಡಾಯಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗಂಗಾಧರಯ್ಯ, ‘ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ ಕೆಲವು ಅಭ್ಯರ್ಥಿಗಳು ಸೂಚನೆಯನ್ನು ಸರಿಯಾಗಿ ಪಾಲಿಸಿಲ್ಲ. ಲಕ್ಷಾಂತರ ಅಭ್ಯರ್ಥಿಗಳಲ್ಲಿ ಕೆಲವರಿಗೆ ಸಮಸ್ಯೆ ಆಗಿದೆ. ಸಮಸ್ಯೆ ಪರಿಹಾರಕ್ಕೆ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಸಣ್ಣ ಪುಟ್ಟ ಲೋಪಗಳಿದ್ದರೂ, ಪರೀಕ್ಷೆ ಬರೆಯಲು ಯಾವುದೇ ಸಮಸ್ಯೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.