ADVERTISEMENT

ಸಿಇಟಿ: ಸರ್ಕಾರಿ ಕೋಟಾ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಬೆಂಗಳೂರು: ಕಾಯ್ದೆ ತಡೆ ಹಿಡಿದಿರುವ ಪರಿಣಾಮ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಮುಂದುವರೆಯಲಿದೆ. ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆದ ನಂತರವೇ ಸೀಟು ಹಂಚಿಕೆ ಪ್ರಮಾಣ ನಿರ್ಧಾರವಾಗಲಿದೆ.
2013–14ನೇ ಸಾಲಿನಲ್ಲಿ ಎಂಜಿನಿಯರಿಂಗ್‌ನಲ್ಲಿ ಶೇ 45ರಷ್ಟು ಹಾಗೂ ವೈದ್ಯಕೀಯ ವಿಭಾಗದಲ್ಲಿ ಶೇ 40ರಷ್ಟು ಸೀಟುಗಳನ್ನು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದವು.

ಚುನಾವಣೆ ಗುಮ್ಮ: ಬರುವ ಏಪ್ರಿಲ್‌ – ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಶುಲ್ಕ ಹೆಚ್ಚಳ ಮಾಡಿ ಸಾರ್ವಜನಿಕರ ವಿರೋಧ ಕಟ್ಟಿಕೊಳ್ಳಲು ಯಾವುದೇ ಸರ್ಕಾರ ಬಯಸುವುದಿಲ್ಲ. ಹೀಗಾಗಿ ಶುಲ್ಕ ನಿಗದಿ ಮಾಡುವುದು ಈ ಬಾರಿಯೂ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಲಿದೆ.

ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಜನವರಿಯಲ್ಲಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ­ಗಳೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
2006ರ ಕಾಯ್ದೆಯನ್ನು ತಡೆಹಿಡಿಯಲು ನಿರ್ಧ­ರಿಸಿದ್ದು, ಅದಕ್ಕೆ ವಿಧಾನಮಂಡಲದ ಒಪ್ಪಿಗೆ ಪಡೆಯ­ಬೇಕು. ಅದಾದ ನಂತರ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ತಿರುವು: 2006ರ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹೋರಾಟ ರಾಜಕೀಯ ತಿರುವು ಪಡೆಯುವ ಲಕ್ಷಣಗಳಿವೆ. ಇದನ್ನು ತಡೆಹಿಡಿಯದಿದ್ದರೆ ಅನಗತ್ಯವಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಹುದು ಎಂದು ಹಿರಿಯ ಸಚಿವರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ಈ ಕಾಯ್ದೆ ರೂಪಿಸಿದ್ದು ನಮ್ಮ ಸರ್ಕಾರ ಅಲ್ಲ. ಆದರೂ, ಈ ಸರ್ಕಾರ ಬಡವರ ವಿರೋಧಿ ಎಂಬ ಅಭಿಪ್ರಾಯ ಮೂಡುವ ಹಾಗೆ ಪ್ರಚಾರ ನಡೆದಿದೆ. ಇದನ್ನು ಸದ್ಯಕ್ಕೆ ತಡೆಹಿಡಿಯಬೇಕು. ಇದರ ಸಾಧಕ – ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು’ ಎಂದು ಸಚಿವರಾದ ಎಚ್‌.ಕೆ.ಪಾಟೀಲ, ಎಚ್‌.ಸಿ.­ಮಹದೇವಪ್ಪ ಸಲಹೆ ಮಾಡಿದರು ಎನ್ನಲಾಗಿದೆ. ಕಾಯ್ದೆ ಜಾರಿಯಾದರೆ ಒಳ್ಳೆಯದು ಎಂದು ಸಚಿವರಾದ ದೇಶಪಾಂಡೆ, ಡಾ.ಶರಣಪ್ರಕಾಶ ಪಾಟೀಲ ಹೇಳಿದರು ಎನ್ನಲಾಗಿದೆ. ಕಾಯ್ದೆ ಚೆನ್ನಾಗಿದೆ. ಆದರೆ, ಶುಲ್ಕ ಹೆಚ್ಚಾದರೆ ಬಡ ವಿದ್ಯಾರ್ಥಿಗಳಿಗೆ ತೊಂದರೆ­ಯಾಗಬಹುದು. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ದೇಶಪಾಂಡೆ ಸಲಹೆ ಮಾಡಿದರು ಎಂದು ಗೊತ್ತಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ನಂತರ ಸಿದ್ದರಾಮಯ್ಯ ಅವರು ಕಾಯ್ದೆ ತಡೆಹಿಡಿಯುವ ನಿರ್ಧಾರಕ್ಕೆ ಬಂದರು ಎಂದು ತಿಳಿದುಬಂದಿದೆ.

ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳ ಪಟ್ಟು
ಬೆಂಗಳೂರು: ‘ಸರ್ಕಾರ ಏನಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ. ಶುಲ್ಕ ಹೆಚ್ಚಳ ಮಾಡಬೇಕು ಅಷ್ಟೆ’ – ಇದು ಖಾಸಗಿ ಎಂಜಿನಿಯರಿಂಗ್‌ ಕಾಲೇಜು­ಗಳ ಒಕ್ಕೂಟದ ಕಾರ್ಯದರ್ಶಿ ಡಾ.ಎಂ.ಕೆ.­ಪಾಂಡುರಂಗ ಶೆಟ್ಟಿ ಅವರು ಖಡಕ್‌ ಆಗಿ ಹೇಳಿದ ಮಾತು. 2006ರ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಕಾಯ್ದೆಯನ್ನು ಸರ್ಕಾರ ತಡೆಹಿಡಿಯಲು ತೀರ್ಮಾ­ನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮುಂದಿನ ವರ್ಷ ಶುಲ್ಕ ಹೆಚ್ಚಳ ಮಾಡಲೇ ಬೇಕು. ಇಲ್ಲದಿದ್ದರೆ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದರು.

‘ಕಾಲೇಜುಗಳನ್ನು ನಡೆಸಲು ಎಷ್ಟು ವೆಚ್ಚವಾಗು­ತ್ತದೆ ಎಂಬುದನ್ನು ಆಧರಿಸಿ ಶುಲ್ಕ ನಿಗದಿ ಮಾಡ­ಬೇಕು. ಅದಕ್ಕಿಂತ ಹೆಚ್ಚಿಗೆ ಕೊಡಿ ಎಂದು ನಾವು ಕೇಳುವುದಿಲ್ಲ’ ಎಂದರು.

2013–14ನೇ ಸಾಲಿನಲ್ಲಿ ಶುಲ್ಕ ಹೆಚ್ಚಳ ಮಾಡಿಲ್ಲ. ಇದರಿಂದ ಕಾಲೇಜುಗಳಿಗೆ ನಷ್ಟವಾಗಿದೆ. ಸಿಬ್ಬಂದಿಯ ವೇತನ ಹೆಚ್ಚಳದಿಂದಾಗಿ ಅಧಿಕ ಖರ್ಚು ಬರುತ್ತಿದೆ. ಮತ್ತೊಂದೆಡೆ ಸೀಟುಗಳು ಖಾಲಿ ಉಳಿಯುತ್ತಿವೆ. ಹೀಗಾಗಿ ಕಾಲೇಜುಗಳನ್ನು ನಡೆಸು­ವುದೇ ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT