ADVERTISEMENT

ಸಿ.ಎಂ ಆಗಲ್ಲ ಎಂದು ಹೇಳಿಲ್ಲ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ದಾವಣಗೆರೆ: `ನಾನು ಸನ್ಯಾಸಿಯೇನಲ್ಲ~ ಎಂದು ಪುನರುಚ್ಚರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, `ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಯಾರು ಆ ಹುದ್ದೆಯಲ್ಲಿ ಇರಬೇಕು ಎಂಬುದನ್ನು ಹೈಕಮಾಂಡ್ ಸೂಕ್ತ ಕಾಲದಲ್ಲಿ ನಿರ್ಧರಿಸುತ್ತದೆ~ ಎಂದು ತಿಳಿಸಿದರು.

ನಗರದಲ್ಲಿ  ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಜಿಎಂಐಟಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
`ನಾನು ನನ್ನ ಪಾಡಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ಇದರಿಂದ ಬೇರೆ ಸಂದೇಶ ರವಾನೆಯಾ ಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಹೇಳಿಯೇ ಇಲ್ಲ. ನೀವೇ (ಮಾಧ್ಯಮದವರು) ಹುಟ್ಟಿಸಿಕೊಂಡು ಬರೆಯುತ್ತಿದ್ದೀರಿ. ನಿರಂತರವಾಗಿ ಪ್ರವಾಸ ನಡೆಯಬೇಕು ಎಂದು ಅವರೇ ಹೇಳಿದ್ದಾರೆ.


ಮುಂಬರುವ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕು ಎಂದರೆ ರಾಜ್ಯಾದ್ಯಂತ ಎರಡು ಬಾರಿ ಪ್ರವಾಸ ಮಾಡಬೇಕಲ್ಲ?~ ಎಂದು ಪ್ರಶ್ನಿಸಿದ ಅವರು, ತಮ್ಮ ಪ್ರವಾಸ ನಿಲ್ಲುವುದಿಲ್ಲ ಎಂಬ ಸಂದೇಶ ರವಾನಿಸಿದರು.

`ಈಗ ಕಡಿಮೆ ಸಮಯವಿದೆ. ಇದರಿಂದಾಗಿ ಬಂದ ಕಡೆಗೆ ಮತ್ತೊಮ್ಮೆ ಬರುವುದಿಲ್ಲ ಎಂದು ಆಯಾ ಜಿಲ್ಲೆಯ ಮುಖಂಡರಿಗೆ ಹೇಳುತ್ತಿದ್ದೇನೆ. ಸಾಮೂಹಿಕವಾಗಿ ಎಲ್ಲ ಕಡೆಗೂ ಹೋಗಲು ಆಗುವುದಿಲ್ಲ. ಪಕ್ಷದ ಪ್ರವಾಸ ಅದರ ಪಾಡಿಗೆ ನಡೆಯುತ್ತದೆ. ಎಲ್ಲ ಜಿಲ್ಲೆಯವರೂ ನನ್ನನ್ನು ಕರೆಯುತ್ತಾರೆ. ಹೀಗಾಗಿ, ನನ್ನ ಪ್ರವಾಸ ಮುಂದುವರಿಸುತ್ತಿದ್ದೇನೆ. ಆದರೆ, ಸಂಘಟನೆ ನಿರ್ಧರಿಸಿದ ಪ್ರವಾಸಕ್ಕೆ ಆದ್ಯತೆ ನೀಡುತ್ತೇನೆ. ಕೋರ್ ಕಮಿಟಿ ಸಭೆಯಲ್ಲಿ ಒಂದಷ್ಟು ಸಮಾವೇಶ ನಡೆಸುವ ಬಗ್ಗೆ ಯೋಜಿಸಲಾಗಿದ್ದು, ಅಲ್ಲಿಗೆ ಸಾಮೂಹಿಕವಾಗಿ ಹೋಗುತ್ತೇವೆ~ ಎಂದು ಸ್ಪಷ್ಟಪಡಿಸಿದರು. `ಪಕ್ಷದ ಮುಖಂಡರಲ್ಲಿ ಯಾವುದೇ ಗೊಂದಲಗಳಿಲ್ಲ. ನಮ್ಮಲ್ಲಿ ಯಾವುದೇ ಬಣವಿಲ್ಲ; ಇರುವುದೆಲ್ಲಾ ಬಿಜೆಪಿ ಬಣ. ಡಿ.ವಿ. ಸದಾನಂದಗೌಡ ಅವರು ಸಿಎಂ ಆಗಿ ಮುಂದುವರಿಯಬೇಕೋ; ಬೇಡವೋ ಎಂಬುದು ನನ್ನ ಕೈಲಿಲ್ಲ. ಹೈಕಮಾಂಡ್ ಅದನ್ನು ತೀರ್ಮಾನಿಸುತ್ತದೆ~ ಎಂದರು.

`ನಾನು ಮೃದುವಾಗಬೇಕು ಎಂದು ಇತ್ತೀಚೆಗೆ ಪಾಠ ಕಲಿತಿದ್ದೇನೆ~ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT