ADVERTISEMENT

ಸಿಎಂ ಜತೆ ಚರ್ಚಿಸಿ ಕ್ರಮ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಸಿಎಂ ಜತೆ ಚರ್ಚಿಸಿ ಕ್ರಮ
ಸಿಎಂ ಜತೆ ಚರ್ಚಿಸಿ ಕ್ರಮ   

ಬೆಂಗಳೂರು: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಸಿಕ್ಯೂಟರ್‌ಗಳಿಗೆ ಸ್ವತಂತ್ರ ವಸತಿ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯಿಂದ ಒದಗಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುತ್ತೇನೆ’ ಎಂದು ಇಲಾಖೆ ಸಚಿವ ಸಿ.ಎಂ.ಉದಾಸಿ ಭರವಸೆ ನೀಡಿದರು. ನಗರದಲ್ಲಿ ಶನಿವಾರ ‘ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘ’ವು ಏರ್ಪಡಿಸಿದ್ದ 10ನೇ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಾಸಿಕ್ಯೂಟರ್‌ಗಳ ಪಾತ್ರ ಮಹತ್ವದ್ದಾಗಿದೆ.

ನೊಂದವರಿಗೆ ನ್ಯಾಯ ಕೊಡಿಸುವ ಮತ್ತು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಅವರ ಪಾತ್ರ ಮುಖ್ಯವಾದುದು. ಅವರ  ಹುದ್ದೆಯನ್ನು ಮೇಲ್ದರ್ಜೆಗೇರಿಸುವ, ವೇತನ ತಾರತಮ್ಯವನ್ನು ನಿವಾರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ’ ಎಂದರು. ‘ಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆ’ಯ ನಿರ್ದೇಶಕಿ ಎಚ್.ಆರ್.ರೇಣುಕ ಮಾತನಾಡಿ, ‘ಕೇಂದ್ರ ಸರ್ಕಾರದ ಅನುದಾನದಡಿ ಪ್ರಾಸಿಕ್ಯೂಟರ್‌ಗಳಿಗೆ ಕಳೆದ ಐದು ವರ್ಷಗಳಿಂದ ತರಬೇತಿ ನೀಡಲಾಗುತ್ತಿದೆ.

ವೃತ್ತಿ ಕೌಶಲ ಗುರುತಿಸಿ ವೃದ್ಧಿಸಲು ಅನೇಕ ಉಪನ್ಯಾಸ, ವಿಚಾರ ಸಂಕಿರಣಗಳನ್ನು ನ್ಯಾಯಾಂಗ ಅಕಾಡೆಮಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಕಳೆದ ವರ್ಷದಿಂದ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿದ್ದು ದೇಶದ ಇತರ ಉತ್ತಮ ಅಭಿಯೋಗ ಇಲಾಖೆಗಳಲ್ಲಿ ಒಂದಾಗಿ ರಾಜ್ಯದ ಇಲಾಖೆಯೂ ಗುರುತಿಸಿಕೊಂಡಿದೆ’ ಎಂದರು. ಇಲಾಖೆಯ ಜಂಟಿ ನಿರ್ದೇಶಕರಾದ ಎಸ್.ಪಿ.ಅಣ್ಣೇಗೌಡ, ಸಂಘದ ಅಧ್ಯಕ್ಷ ಕೆ.ಬಿ.ಕುಲಕರ್ಣಿ, ಉಪಾಧ್ಯಕ್ಷೆ ಪುಷ್ಪಾ ಎಸ್. ನಾಯಕ್, ಕಾರ್ಯದರ್ಶಿ ಬಿ.ರಂಗಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸುಮಾರು 500 ಮಂದಿ ಪ್ರಾಸಿಕ್ಯೂಟರ್‌ಗಳು ಎರಡು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.