ADVERTISEMENT

ಸಿ.ಎಂ, ಸಚಿವರೊಬ್ಬರ ಮಕ್ಕಳಿಗೆ ಟಿಕೆಟ್‌ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 20:20 IST
Last Updated 11 ಏಪ್ರಿಲ್ 2018, 20:20 IST
ಸಿ.ಎಂ, ಸಚಿವರೊಬ್ಬರ ಮಕ್ಕಳಿಗೆ ಟಿಕೆಟ್‌ ಸಾಧ್ಯತೆ
ಸಿ.ಎಂ, ಸಚಿವರೊಬ್ಬರ ಮಕ್ಕಳಿಗೆ ಟಿಕೆಟ್‌ ಸಾಧ್ಯತೆ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಸೇರಿ ಮೂವರು ಕಾಂಗ್ರೆಸ್‌ ನಾಯಕರ ಮಕ್ಕಳಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದೆ.

ವರುಣಾ ಕ್ಷೇತ್ರದಿಂದ ಪುತ್ರ ಡಾ. ಯತೀಂದ್ರನನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಬಯಸಿದ್ದರು. ಅವರ ನಿರೀಕ್ಷೆಗೆ ಹೈಕಮಾಂಡ್‌ ಸಮ್ಮತಿ ಸೂಚಿಸಿದೆ.  ಅಲ್ಲದೆ, ಸಂಸದ ಕೆ.ಎಚ್‌. ಮುನಿಯಪ್ಪ ಪುತ್ರಿ ರೂಪಾ ಶಶಿಧರ್‌ಗೆ ಕೆಜಿಎಫ್‌ ಕ್ಷೇತ್ರದಿಂದ ಹಾಗೂ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಗೆ ಜಯನಗರ ಕ್ಷೇತ್ರದಿಂದ ಟಿಕೆಟ್‌ ನೀಡಲು ಕಾಂಗ್ರೆಸ್‌ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಇದೇ 13ರಂದು ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುಮಾರು 170 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಹಾಲಿ ಶಾಸಕರು ಮತ್ತು ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದ
ವರ ಹೆಸರಿರುವ ನಿರೀಕ್ಷೆ ಇದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಪಕ್ಷದ ಹಿರಿಯ ಮುಖಂಡ ಮಧುಸೂದನ್‌ ಮಿಸ್ತ್ರಿ ನೇತೃತ್ವದ ಚುನಾವಣಾ ಪರಿಶೀಲನಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ, ಸಚಿವರು ಮತ್ತು ಹಿರಿಯ ಮುಖಂಡರ ಮಕ್ಕಳು ಮತ್ತು ಕೆಲವರ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆ ನಡೆದಿದೆ. ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟು
ಕೊಟ್ಟು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಮುಖ್ಯಮಂತ್ರಿಯ ಇಂಗಿತಕ್ಕೆ ವರಿಷ್ಠರು ಒಪ್ಪಿದ್ದಾರೆ ಎಂದೂ ಮೂಲಗಳು ಹೇಳಿವೆ. ಪಕ್ಷದ ಹಿರಿಯ ನಾಯಕಿ ಮಾರ್ಗರೆಟ್‌ ಆಳ್ವ ಪುತ್ರ ನಿವೇದಿತ್‌ ಆಳ್ವಗೆ ಶಿರಸಿ ಕ್ಷೇತ್ರದಿಂದ ಟಿಕೆಟ್‌ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಪುತ್ರ ಸಂತೋಷ್‌ಗೆ ಟಿಕೆಟ್‌ ನೀಡುವಂತೆ ಸಚಿವ ಟಿ.ಬಿ. ಜಯಚಂದ್ರ ಲಾಬಿ ನಡೆಸಿದ್ದಾರೆ. ಆದರೆ, ಜಾತಿ ಲೆಕ್ಕಾಚಾರ ಪರಿಗಣಿಸಿ ಯಾದವ ಸಮುದಾಯವರಿಗೆ ಟಿಕೆಟ್‌ ನೀಡಲು ಪಕ್ಷ ತೀರ್ಮಾನಿಸಿದೆ.

ಆದರೆ, ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್‌, ಹಿರಿಯ ಮುಖಂಡ ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿಖಾನ್ ಹಾಗೂ ಸಿ.ಕೆ. ಜಾಫರ್‌ ಷರೀಫ್‌ ಮೊಮ್ಮಗ ರಹಮಾನ್‌ ಷರೀಫ್‌ ಟಿಕೆಟ್‌ ಸಿಗುವ ಸಾಧ್ಯತೆ ಇಲ್ಲ.

ಜಯನಗರದಿಂದ ಮನ್ಸೂರ್ ಅಲಿಖಾನ್ ಟಿಕೆಟ್‌ ಕೇಳಿದ್ದರು. ರಹಮಾನ್‌ ಷರೀಫ್‌ಗೆ ಹೆಬ್ಬಾಳ ಕ್ಷೇತ್ರ ಟಿಕೆಟ್‌ ಗಿಟ್ಟಿಸಿಕೊಳ್ಳಲು ಜಾಫರ್‌ ಷರೀಫ್‌ ಒತ್ತಡ ಹಾಕಿದ್ದರು. ಆದರೆ, ಅಲ್ಲಿ ಮುಖ್ಯಮಂತ್ರಿ ಆಪ್ತ ಬೈರತಿ ಸುರೇಶ್‌ಗೆ ಟಿಕೆಟ್‌ ಖಚಿತವಾಗಿದೆ.

ಈ ಕಾರಣಕ್ಕೆ ಬೈರತಿ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೂಡಾ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.