ADVERTISEMENT

ಸಿ.ಎಚ್‌. ವಿಜಯಶಂಕರ್‌ ಮನವೊಲಿಸಲು ಮುಂದುವರಿದ ಬಿಜೆಪಿ ನಾಯಕರ ಕಸರತ್ತು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಸಿ.ಎಚ್‌. ವಿಜಯಶಂಕರ್‌ ಮನವೊಲಿಸಲು ಮುಂದುವರಿದ ಬಿಜೆಪಿ ನಾಯಕರ ಕಸರತ್ತು
ಸಿ.ಎಚ್‌. ವಿಜಯಶಂಕರ್‌ ಮನವೊಲಿಸಲು ಮುಂದುವರಿದ ಬಿಜೆಪಿ ನಾಯಕರ ಕಸರತ್ತು   

ಮೈಸೂರು: ಬಿಜೆಪಿ ತೊರೆಯಲು ಮುಂದಾಗಿರುವ ಹಿರಿಯ ಮುಖಂಡ ಸಿ.ಎಚ್‌.ವಿಜಯಶಂಕರ್‌ ಅವರ ಮನವೊಲಿಸುವ ಪಕ್ಷದ ವರಿಷ್ಠರ ಕಸರತ್ತು ಮುಂದುವರಿದಿದೆ.

ಸಂಸದೆ ಶೋಭಾ ಕರಂದ್ಲಾಜೆ ಅವರು ನಡೆಸಿದ ಪ್ರಯತ್ನ ವಿಫಲವಾದ ಬೆನ್ನಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮೈಸೂರಿಗೆ ಭೇಟಿ ನೀಡುತ್ತಿದ್ದು ಕೊನೆಯ ಪ್ರಯತ್ನ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಾತುಕತೆ ನಡೆಸುವ ಉದ್ದೇಶದಿಂದ ಮಂಗಳವಾರ ವಿಜಯಶಂಕರ್ ಮನೆಗೆ ಶೋಭಾ ಭೇಟಿ ನೀಡಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ರಾತ್ರಿ 10 ಗಂಟೆವರೆಗೆ ಪ್ರಯತ್ನಿಸಿದರೂ ಭೇಟಿ ಸಾಧ್ಯವಾಗದ ಕಾರಣ ನಿರಾಸೆಯಿಂದ ಹಿಂತಿರುಗಿದರು. ವಿಜಯಶಂಕರ್‌ ಈ ಸಂದರ್ಭದಲ್ಲಿ ಮನೆಯ ಮತ್ತೊಂದು ಕೊಠಡಿಯಲ್ಲಿ ಇದ್ದರೂ ಭೇಟಿಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ವಿಜಯಶಂಕರ್‌ ಅವರು ಬಿಜೆಪಿ
ಯಲ್ಲಿಯೇ ಇದ್ದಾರೆ. ಈಗ ನಡೆದಿರುವ ವಿದ್ಯಮಾನಗಳನ್ನು ಮೈಸೂರಿಗೆ ಭೇಟಿ ನೀಡುತ್ತಿರುವ ಯಡಿಯೂರಪ್ಪ ಗಮನಕ್ಕೆ ತರುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಯಡಿಯೂರಪ್ಪ ಕೆಲ ದಿನಗಳ ಹಿಂದೆ ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ವಿಜಯಶಂಕರ್‌ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ, ಶೋಭಾ ಅವರನ್ನು ಸಂಧಾನ ನಡೆಸಲು ಕಳುಹಿಸಲಾಗಿತ್ತು. ಈ ಭೇಟಿಯೂ ಸಾಧ್ಯವಾಗಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಅವರು ಪಕ್ಷ ತೊರೆಯುವುದು ಖಚಿತವಾದಂತಿದೆ.

ವಿಜಯಶಂಕರ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಆದರೆ, ಬಿಜೆಪಿ ವರಿಷ್ಠರು ಈ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಪಿರಿಯಾಪಟ್ಟಣ ಕ್ಷೇತ್ರದ ಬದಲಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚನೆ ಬಂದಿದೆ. ಇದು ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸಿದೆ.

ಸಿದ್ದರಾಮಯ್ಯ ಅವರ ಜತೆಗೂ ಮಾತುಕತೆ ನಡೆಸಿದ್ದು, ಪಕ್ಷ ತೊರೆಯಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ವಿಜಯಶಂಕರ್ ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.