ಬೆಂಗಳೂರು: ರಾಜ್ಯದ ಕೆಲವೆಡೆ ಗುರುವಾರ ಮಳೆಯಾಗಿದ್ದು ಸಿಡಿಲು ಬಡಿದು ತುಮಕೂರು ಜಿಲ್ಲೆಯ ಹುಳಿಯಾರು ಬಳಿ ನಾಲ್ವರು ಸತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸಿಡಿಲು ಮತ್ತು ಬಿರುಗಾಳಿಯಿಂದ ಕೂಡಿದ ಮಳೆಗೆ 15 ಕುರಿ, 5 ಮೇಕೆಗಳು ಬಲಿಯಾಗಿವೆ. ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಹುಳಿಯಾರು (ತುಮಕೂರು ಜಿಲ್ಲೆ): ಸಿಡಿಲು ಬಡಿದು ನಾಲ್ವರು ಸತ್ತು ಮೂವರು ಗಾಯಗೊಂಡ ಘಟನೆ ಇಲ್ಲಿನ ಬೋರನಕಣಿವೆ ಜಲಾಶಯದ ಹಿನ್ನೀರಿನಲ್ಲಿ ಗುರುವಾರ ಸಂಜೆ ನಡೆದಿದೆ.
ಜಯಚಂದ್ರ ನಗರದ ಗಂಗಜ್ಜ (60), ಗಂಗರಾಜು (35), ಮಂಜಣ್ಣ (35), ಖಾಸಿಂಸಾಬ್ ಪಾಳ್ಯದ ಜಬೀಬುಲ್ಲ (25) ಮೃತರು. ಜಯಚಂದ್ರ ನಗರದ ಹರೀಶ್, ಮಾರೇಶ್, ರಾಮಾಂಜನೇಯ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೋರನಕಣಿವೆ ಜಲಾಶಯದಲ್ಲಿ ಮೀನು ಹಿಡಿಯಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.
ಮಧ್ಯಾಹ್ನ 3 ಗಂಟೆಯ ವೇಳೆಗೆ ಸಣ್ಣದಾಗಿ ಮಳೆ ಶುರುವಾಯಿತು. ಜೋರು ಮಳೆ ಬರುವ ವೇಳೆಗೆ ಬಲೆ ಹಾಕಿದರೆ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗಬಹುದೆಂಬ ಆಸೆಯಲ್ಲಿ ಈ ತಂಡ ಜಲಾಶಯಕ್ಕೆ ತೆರಳಿತ್ತು.
ಜಲಾಶಯದಲ್ಲಿ ಬಲೆ ಹಾಕಿ ತೆಪ್ಪದ ಮೂಲಕ ದಡ ಸೇರುವಷ್ಟರಲ್ಲಿ ಮಳೆ ಬಿರುಸಾಗಿದೆ.
ಬಿರುಸು ಮಳೆಯಿಂದ ರಕ್ಷಣೆ ಪಡೆಯಲು ತೆಪ್ಪವನ್ನು ಮರೆ ಮಾಡಿಕೊಂಡು ಕುಳಿತಿದ್ದಾರೆ.
ಇವರು ಕುಳಿತ ಸ್ವಲ್ಪ ಸಮಯದಲ್ಲೇ ಸಿಡಿಲು ಬಡಿಯಿತು ಎಂದು ದಡದಿಂದ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಮೀನುಗಾರರ ತಂಡದವರು ತಿಳಿಸಿದ್ದಾರೆ.
ಒಂದೇ ಜಾಗಕ್ಕೆ ಬಿಟ್ಟುಬಿಟ್ಟು ಎರಡು ಸಲ ಸಿಡಿಲು ಬಡಿದಿದೆ. ಸಿಡಿಲಿನ ಝಳಕ್ಕೆ ಮೃತದೇಹಗಳು ಕಪ್ಪಿಟ್ಟು ಹೋಗಿವೆ. ಗಾಯಗೊಂಡ ಮೂವರು ಪ್ರಜ್ಞಾಶೂನ್ಯರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಓಡಿಬಂದ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ತಂಡ ಗಾಯಾಳುಗಳನ್ನು ಹುಳಿಯಾರು ಆಸ್ಪತ್ರೆಗೆ ಸೇರಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಸ್ಥಳಕ್ಕೆ ತಹಶೀಲ್ದಾರ್‌ಉಮೇಶ್‌ಚಂದ್ರ ಸಹ ಭೇಟಿ ನೀಡಿ ವಿವರ ಪಡೆದರು.
ಹಿರಿಯೂರು ವರದಿ:
ತಾಲ್ಲೂಕಿನ ಉಪ್ಪಾರಹಳ್ಳಿಯ ಅಂಬರೀಶ್ ಎಂಬುವವರ ಸುಮಾರು ರೂ 60 ಸಾವಿರ ಬೆಲೆ ಬಾಳುವ ಐದು ಕುರಿ ಮತ್ತು ಐದು ಮೇಕೆಗಳು, ಕಣಜನಹಳ್ಳಿಯ ಲಕ್ಷ್ಮಣ ಎಂಬುವವರ ಸುಮಾರು ರೂ 40 ಸಾವಿರ ಬೆಲೆಯ 2 ಸಣ್ಣ ಹಾಗೂ 8 ದೊಡ್ಡ ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿವೆ.
ವೇಣುಕಲ್ಲುಗುಡ್ಡದಲ್ಲಿ ಎರಡು ಎಕರೆ ಮತ್ತು ಬ್ಯಾಡರಹಳ್ಳಿಯಲ್ಲಿ ಒಂದು ಎಕರೆಯಲ್ಲಿ ಫಸಲಿಗೆ ಬಂದಿದ್ದ ಬಾಳೆಗಿಡಗಳು ನೆಲಕ್ಕೆ ಉರುಳಿವೆ. ಅಂಬಲಗೆರೆಯಲ್ಲಿ 8, ಶಿವಗಂಗದಲ್ಲಿ 2 ಕಂಬಗಳು ನೆಲಕ್ಕೆ ಬಿದ್ದಿವೆ ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ತಿಳಿಸಿದರು.
ಬುಧವಾರ ಸಂಜೆ ಮಳೆಗೆ ಹಾನಿಗೊಳಗಾದ ಅಂಬಲಗೆರೆ, ಹೇಮದಳ, ಜಡೆಗೊಂಡನಹಳ್ಳಿ, ಶಿವಗಂಗ, ಉಪ್ಪಾರಹಳ್ಳಿಹಳಿಗೆ ಭೇಟಿ ನೀಡಿದ್ದ ಅವರು, ಬಿದ್ದು ಹೋಗಿರುವ ವಿದ್ಯುತ್ ಕಂಬಗಳನ್ನು ತಕ್ಷಣ ಬದಲಾಯಿಸುವಂತೆ ಬೆಸ್ಕಾಂಗೆ ಸೂಚಿಸಿದರು.
ಬುಧವಾರ ರಾತ್ರಿ ತಾಲ್ಲೂಕಿನ ಈಶ್ವರಗೆರೆಯಲ್ಲಿ 46.4 ಮಿ.ಮೀ., ಬಬ್ಬೂರಿನಲ್ಲಿ 25.6 ಮಿ.ಮೀ., ಜವನಗೊಂಡನಹಳ್ಳಿಯಲ್ಲಿ 26 ಮಿ.ಮೀ., ಹಿರಿಯೂರಿನಲ್ಲಿ 18.94 ಮಿ.ಮೀ., ಇಕ್ಕನೂರಿನಲ್ಲಿ 10.2 ಮಿ.ಮೀ., ಸೂಗೂರಿನಲ್ಲಿ 12 ಮಿ.ಮೀ. ಮಳೆಯಾಗಿದೆ. ಗುರುವಾರ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಹಿರಿಯೂರು ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.