ADVERTISEMENT

ಸಿದ್ದರಾಮಯ್ಯ ಸರ್ಕಾರ ಕಾಂಗ್ರೆಸ್‌ನ ಎಟಿಎಂ: ಯೋಗಿ ಆದಿತ್ಯನಾಥ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಜನಸುರಕ್ಷಾ ಯಾತ್ರೆಯ ಸಮಾರೋಪದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜನರತ್ತ ಕೈಬೀಸಿದರು. ಮಟ್ಟಾರು ರತ್ನಾಕರ ಹೆಗ್ಡೆ, ಸಿ.ಟಿ. ರವಿ, ಬಿ.ಎಸ್‌. ಯಡಿಯೂರಪ್ಪ, ಶ್ರೀರಾಮುಲು, ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ಸುನೀಲ್‌ಕುಮಾರ್‌ ಇದ್ದರು. –ಪ್ರಜಾವಾಣಿ ಚಿತ್ರ
ಜನಸುರಕ್ಷಾ ಯಾತ್ರೆಯ ಸಮಾರೋಪದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜನರತ್ತ ಕೈಬೀಸಿದರು. ಮಟ್ಟಾರು ರತ್ನಾಕರ ಹೆಗ್ಡೆ, ಸಿ.ಟಿ. ರವಿ, ಬಿ.ಎಸ್‌. ಯಡಿಯೂರಪ್ಪ, ಶ್ರೀರಾಮುಲು, ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ಸುನೀಲ್‌ಕುಮಾರ್‌ ಇದ್ದರು. –ಪ್ರಜಾವಾಣಿ ಚಿತ್ರ   

ಮಂಗಳೂರು: ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಜನಸುರಕ್ಷಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಅಭಿವೃದ್ಧಿಯೂ ಆಗುತ್ತಿಲ್ಲ. ಜನರಿಗೆ ಸುರಕ್ಷತೆಯೂ ಇಲ್ಲ. ಹಾಗಾದರೆ, ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.

‘ರಾಜ್ಯದ ಸಿದ್ದರಾಮಯ್ಯ ಸರ್ಕಾರ ಜಿಹಾದಿ ಸಂಘಟನೆಗಳ ಜತೆಗೆ ಕೈಜೋಡಿಸಿದೆ. ಅವರ ಮೇಲಿನ 175ಕ್ಕೂ ಹೆಚ್ಚು ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದೇ ಇದಕ್ಕೆ ಸಾಕ್ಷಿ. ಸರ್ಕಾರದ ಬೆಂಬಲ ಇಲ್ಲದೇ ನಿರಾತಂಕವಾಗಿ ಅಪರಾಧ ಚಟುವಟಿಕೆ ನಡೆಸುವುದು ಸಾಧ್ಯವಿಲ್ಲ’ ಎಂದು ಹೇಳಿದರು.

ADVERTISEMENT

ಕರ್ನಾಟಕದಲ್ಲಿ ಸದ್ಯ ಇರುವ ಸ್ಥಿತಿಯೇ ಉತ್ತರ ಪ್ರದೇಶದಲ್ಲಿ ಇತ್ತು. ಭ್ರಷ್ಟಾಚಾರ ಮತ್ತು ಅಪರಾಧ ಮುಕ್ತ ರಾಜ್ಯ ಮಾಡುವ ಭರವಸೆಯನ್ನು ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದಿದೆ. 11 ತಿಂಗಳಲ್ಲಿಯೇ ಅಪರಾಧ ಚಟುವಟಿಕೆಗಳನ್ನು ಸಂಪೂರ್ಣ ನಿಯಂತ್ರಿಸಲಾಗಿದೆ. ಈಗ ಅಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದಲ್ಲಿಯೂ ಅಂತಹ ವಾತಾವರಣ ನಿರ್ಮಾಣ ಮಾಡಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

‘ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಕಾಸದ ಯಾತ್ರೆ ಆರಂಭವಾಗಿದೆ. ತ್ರಿಪುರಾ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಮುಕ್ತವಾಗಿದೆ. ನಾಗಾಲ್ಯಾಂಡ್‌, ಮೇಘಾಲಯದಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈಶಾನ್ಯ ರಾಜ್ಯಗಳು ಕಾಂಗ್ರೆಸ್‌ ಮುಕ್ತ ಆಗುವುದಾದರೆ, ಕರ್ನಾಟಕದಲ್ಲಿಯೂ ಅದು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕಟುಕ ಮುಖ್ಯಮಂತ್ರಿ: ರಾಜ್ಯದಲ್ಲಿ ಇರುವುದು ಪಾತಕಿ ಸರ್ಕಾರ, ಪಾಪಿ ಮುಖ್ಯಮಂತ್ರಿ. ಕೊಲೆಗಡುಕ ಸರ್ಕಾರ, ಕಟುಕ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

‘ಕೇವಲ ಶೇ 15 ರಷ್ಟಿರುವ ಅಲ್ಪಸಂಖ್ಯಾತರ ವೋಟಿಗಾಗಿ ಸಿದ್ದರಾಮಯ್ಯ ಜೊಲ್ಲು ಸುರಿಸುತ್ತೀರಿ. ಶೇ 80 ರಷ್ಟಿರುವ ಹಿಂದೂಗಳಾದ ನಾವೇನು ಬೇವರ್ಸಿಗಳೇ’ ಎಂದು ಅವರು ಪ್ರಶ್ನಿಸಿದರು.

ಮೆರವಣಿಗೆಯಲ್ಲಿ ಸರ್ಕಾರಕ್ಕೆ ಧಿಕ್ಕಾರ
ಕುಶಾಲನಗರ ಮತ್ತು ಅಂಕೋಲದಿಂದ ಇದೇ 3ರಂದು ಹೊರಟ ಜನಸುರಕ್ಷಾ ಯಾತ್ರೆ ಮಂಗಳವಾರ ಮಂಗಳೂರು ನಗರದ ಅಂಬೇಡ್ಕರ್‌ವೃತ್ತದಲ್ಲಿ ಮಹಾಸಂಗಮಗೊಂಡಿತು. ನಾಲ್ಕು ದಿನಗಳ ಕಾಲ ನಡೆದ ಈ ಪಾದಯಾತ್ರೆಯ ಬೃಹತ್‌ ಸಂಗಮವನ್ನು ಬಿಜೆಪಿ ಮುಖಂಡರಾದ ಜಗದೀಶ್‌ ಶೆಟ್ಟರ್‌ ಉದ್ಘಾಟಿಸಿದರು.

ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ಶಾಸಕ ಸಿ.ಟಿ. ರವಿ, ಸುನೀಲ್‌ ಕುಮಾರ್‌ ಹಾಗೂ ಇತರ ಮುಖಂಡರು ಅಗಲಿದ ಹಿಂದೂ ಕಾರ್ಯಕರ್ತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕೇಂದ್ರ ಮೈದಾನದತ್ತ ಪಾದಯಾತ್ರೆ ಮುಂದುವರೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಂಡಿರುವ ಹಿಂದೂ ವಿರೋಧಿ ನಿಲುವುಗಳನ್ನು ವಿವರಿಸುವ ಬೃಹತ್‌ ಎಲ್‌ಇಡಿ ಫಲಕವನ್ನು ಹೊತ್ತ ಟ್ಯಾಬ್ಲೊದ ಹಿಂದೆ ಬೃಹತ್‌ ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿದರು. ವಿಷಾದದ ಹಿನ್ನೆಲೆ ಸಂಗೀತ, ಸರ್ಕಾರವನ್ನು ಖಂಡಿಸುವ ಹಾಡುಗಳು ಧ್ವನಿವರ್ಧಕದ ಮೂಲಕ ಕೇಳಿ ಬಂತು. ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತರ ಭಾವಚಿತ್ರ ಮತ್ತು ರಾಜ್ಯ ಸರ್ಕಾರವನ್ನು ಖಂಡಿಸುವ ಸಾವಿರಾರು ಫಲಕಗಳನ್ನು ಕಾರ್ಯಕರ್ತರು ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.