ADVERTISEMENT

‘ಸಿದ್ಧ ಸರ್ಕಾರದ ನಡೆ– ಸೇವೆಗಳ ಕಡೆ’ ಯೋಜನೆಗೆ ಶಾಸಕರ ನಿಧಿ ಬಳಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಸಕರ ಅಭಿವೃದ್ಧಿ ನಿಧಿಯಡಿ ಬಳಕೆಯಾಗದೆ ಉಳಿದಿರುವ ₹ 1,000 ಕೋಟಿಗೂ ಹೆಚ್ಚಿನ ಮೊತ್ತವನ್ನು ‘ಸಿದ್ಧ ಸರ್ಕಾರದ ನಡೆ– ಸೇವೆಗಳ ಕಡೆ’ ಎಂಬ ಯೋಜನೆ ರೂಪಿಸಿ ಖರ್ಚು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಪೈಕಿ ಶಾಲೆಗಳು, ಆಸ್ಪತ್ರೆ, ಅಂಗನವಾಡಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ₹ 405 ಕೋಟಿ ಬಳಸಲು ಅನುಮತಿ ನೀಡಲಾಗಿದೆ ಎಂದು ಯೋಜನಾ ಸಚಿವ ಎಂ.ಆರ್. ಸೀತಾರಾಂ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ₹ 243 ಕೋಟಿ ನೀಡಲಾಗುತ್ತಿದ್ದು, ಇದರಿಂದ 2,719 ಹೊಸ ಶಾಲಾ ಕೊಠಡಿಗಳ ನಿರ್ಮಾಣವಾಗುತ್ತದೆ. ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿನ ಒಟ್ಟು 309 ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ₹ 122 ಕೋಟಿ ಹಾಗೂ 346 ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ₹ 40 ಕೋಟಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಅಲ್ಪಾವಧಿ ಟೆಂಡರ್ ಕರೆದು ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆರೋಗ್ಯ ಇಲಾಖೆಯ ಕಾಮಗಾರಿಗಳನ್ನು ಅದೇ  ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮೂಲಕ ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ. ಶಾಲೆಗಳ ನಿರ್ಮಾಣ ಕಾಮಗಾರಿಗಳನ್ನು ಲೋಕೋಪಯೋಗಿ ಹಾಗೂ ಅಂಗನವಾಡಿ ಕಟ್ಟಡಗಳನ್ನು ಪಂಚಾಯತ್ ರಾಜ್ ಇಲಾಖೆ ಎಂಜಿನಿಯರಿಂಗ್ ವಿಭಾಗಕ್ಕೆ ವಹಿಸಲು ಸೂಚಿಸಲಾಗಿದೆ. ಈ ಹಣದ ಬಳಕೆಯ ಪರಿಶೀಲನೆಯನ್ನು ಯೋಜನಾ ಇಲಾಖೆಯೇ ನೋಡಿಕೊಳ್ಳುತ್ತದೆ. ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಲಾಗುವುದು ಸಚಿವರು ವಿವರಿಸಿದರು.

ಆಯಾ ಜಿಲ್ಲೆಯಲ್ಲಿ ಉಳಿದಿರುವ ಹಣವನ್ನು ಅದೇ ಜಿಲ್ಲೆಗೆ ಬಳಸಲು ಸೂಚಿಸಲಾಗಿದೆ. ಇದೇ 19ರಂದು ಎಲ್ಲ ಜಿಲ್ಲಾಧಿಕಾರಿಗಳ ಸಭೆ ಕರೆಯಲಾಗಿದ್ದು, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಉಳಿಕೆ ಬಗ್ಗೆಯೂ ಅಲ್ಲಿ ವಿವರ ಪಡೆಯಲಾಗುವುದು. ಅದರ ಬಳಕೆಗೂ ಯೋಜನೆ ರೂಪಿಸಲಾಗುವುದು ಎಂದು ಸೀತಾರಾಂ ತಿಳಿಸಿದರು.

ಪ್ರದೇಶಾಭಿವೃದ್ಧಿ ನಿಧಿ ₹ 1.5 ಕೋಟಿಗೆ ಇಳಿಕೆ
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ₹ 1.5 ಕೋಟಿಗೆ ಇಳಿಕೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಸಚಿವ ಸೀತಾರಾಂ ತಿಳಿಸಿದರು.

ಸದ್ಯ ಪ್ರತಿ ವರ್ಷ ₹ 2 ಕೋಟಿ ನೀಡಲಾಗುತ್ತದೆ. ಆದರೆ, ಅನೇಕರು ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದಿರುವುದರಿಂದ ಜಿಲ್ಲಾಧಿಕಾರಿ ಖಾತೆಯಲ್ಲೇ ಹಣ ಉಳಿಯುತ್ತಿದೆ. ಆದ್ದರಿಂದ ಅನುದಾನದ ಮೊತ್ತ ಕಡಿಮೆ ಮಾಡಬೇಕು. ಯಾರಾದರೂ ₹ 1.5 ಕೋಟಿ ಬಳಸಿಕೊಂಡು ಮತ್ತೆ ಬೇಡಿಕೆ ಸಲ್ಲಿಸಿದಲ್ಲಿ ಇನ್ನೂ ₹ 50 ಲಕ್ಷ ಒದಗಿಸಬಹುದು. ಈ ಬಗ್ಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.