ADVERTISEMENT

ಸಿಬಿಐನಿಂದ ರೆಡ್ಡಿ ಆಪ್ತರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಬಳ್ಳಾರಿ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಆಪ್ತರಾಗಿರುವ ಸಂಡೂರಿನ ಎಸ್‌ಟಿಡಿ ಮಂಜುನಾಥ ಹಾಗೂ ಹೊಸಪೇಟೆಯ ಸ್ವಸ್ತಿಕ್ ನಾಗರಾಜ್ ಅವರನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ನಗರದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.

ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ)ಗಳ ಅಕ್ರಮ ಗಣಿ ವ್ಯವಹಾರಕ್ಕೆ ಸಹಕಾರ ನೀಡಿರುವ ಈ ಇಬ್ಬರನ್ನು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿದ್ದರಿಂದ,  ನಗರದಲ್ಲಿರುವ ಪೊಲೀಸ್ ಜಿಮಖಾನಾ ವಸತಿಗೃಹದಲ್ಲಿ ತಂಗಿರುವ ಸಿಬಿಐ ಅಧಿಕಾರಿಗಳನ್ನು ಈ ಇಬ್ಬರು ಭೇಟಿ ಮಾಡಿ, ವಿಚಾರಣೆ ಎದುರಿಸಿದರು.
 
ಕೆಲವು ದಿನಗಳ ಹಿಂದೆ ಸಿಬಿಐ ಸಿಬ್ಬಂದಿ ಸಂಡೂರು ಮತ್ತು ಹೊಸಪೇಟೆಯಲ್ಲಿರುವ ಈ ಇಬ್ಬರ ನಿವಾಸಗಳ ಮೇಲೆ ದಾಳಿ ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಹೈದರಾಬಾದ್‌ನಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ನೋಟಿಸ್ ಪಡೆದು ಹೈದರಾಬಾದ್‌ನಲ್ಲೂ ಇವರು ವಿಚಾರಣೆ ಎದುರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.