ADVERTISEMENT

ಸೀಮಾ ಮೇಳಾವ: ಎಂಇಎಸ್ಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:30 IST
Last Updated 20 ಮೇ 2012, 19:30 IST
ಸೀಮಾ ಮೇಳಾವ: ಎಂಇಎಸ್ಗೆ ಮುಖಭಂಗ
ಸೀಮಾ ಮೇಳಾವ: ಎಂಇಎಸ್ಗೆ ಮುಖಭಂಗ   

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಗಡಿ ಸಮಾವೇಶಕ್ಕೆ (ಸೀಮಾ ಮೇಳಾವ) ಮಹಾರಾಷ್ಟ್ರ ಸರ್ಕಾರದ ಯಾವ ಪ್ರತಿನಿಧಿಯೂ ಆಗಮಿಸಲಿಲ್ಲ. ಗಡಿ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳಲು ಹವಣಿಸಿದ ಎಂಇಎಸ್ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಮರಾಠಿ ಭಾಷಿಕರು ಸಮಾವೇಶಕ್ಕೆ ಆಗಮಿಸಬಹುದು ಎಂಬ ಎಂಇಎಸ್ ನಾಯಕರ ನಿರೀಕ್ಷೆ ಹುಸಿಯಾಯಿತು. ನೂರಾರು ಸಂಖ್ಯೆಯಲ್ಲಿದ್ದ ಜನರು ಮಹಾರಾಷ್ಟ್ರದ ಪ್ರಮುಖ ನಾಯಕರ‌್ಯಾರೂ ಆಗಮಿಸದ ಕಾರಣ, ಸಮಾವೇಶ ಬಿಟ್ಟು ಅರ್ಧದಲ್ಲಿಯೇ ಮರಳಿದರು.

ಸಮಾವೇಶದ ಮಧ್ಯದಲ್ಲಿ ಯುವಕರು ಸಂಘಟಕರನ್ನು ತರಾಟೆಗೆ ತೆಗೆದುಕೊಂಡರು. `ಮರಾಠಿ ಭಾಷಿಕರನ್ನು ತಪ್ಪು ದಾರಿಗೆ ಎಳೆಯಬೇಡಿ. ಎಂಇಎಸ್‌ದಲ್ಲಿರುವ ಗುಂಪುಗಾರಿಕೆಯಿಂದಲೇ ಯಾವುದೇ ನಾಯಕರು ಸಮಾವೇಶಕ್ಕೆ ಆಗಮಿಸಿಲ್ಲ. ಮೊದಲು ನಾಯಕರು ಒಂದಾಗಿ~ ಎಂದು ಹೇಳಿ ಸಮಾವೇಶದಿಂದ ನಿರ್ಗಮಿಸಿದರು.
 
ಎಂ.ಇ.ಎಸ್. ಎಚ್ಚರಿಕೆ: `ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಮರಾಠಿ ಭಾಷಿಕರ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಆಗಸ್ಟ್ 15 ರೊಳಗೆ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಆಗುವಂತೆ ಮಹಾರಾಷ್ಟ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ವಿಳಂಬವಾದರೆ ಮಹಾರಾಷ್ಟ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು~ ಎಂದು ಎಂಇಎಸ್ ನಾಯಕರು ಎಚ್ಚರಿಸಿದರು. 

`ಕರ್ನಾಟಕವು ಮರಾಠಿ ಭಾಷಿಕರನ್ನು ಕಡೆಗಣಿಸಿದೆ. ಮರಾಠಿಗರಿಗೆ ಅನ್ಯಾಯ ಮಾಡುತ್ತಿದೆ. ಆದ್ದರಿಂದ ಈ ಪ್ರದೇಶವನ್ನು ಕೇಂದ್ರಾಡಳಿತವಾಗಿ ಮಾಡಬೇಕು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ತೆಗೆದುಕೊಂಡಿದ್ದು, ಕೂಡಲೇ ಅನುಷ್ಠಾನಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕರ್ನಾಟಕದೊಂದಿಗೆ ಎಲ್ಲ ರೀತಿಯ ಸಂಬಂಧ ಕಡಿತಗೊಳಿಸಬೇಕು ಎಂದು ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕಿರಣ ಠಾಕೂರ ಆಗ್ರಹಿಸಿದರು.
200 ಬಂಧನ: ಮಹಾ ಮೇಳಾವ ಖಂಡಿಸಿ ಪ್ರತಿಭಟನೆಗೆ ಮುಂದಾದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಗರದ ನಾಗಶಾಂತಿ ಹೀರೊ ಹೊಂಡಾ ಷೋರೂಂಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಹೊರತುಪಡಿಸಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಬಸ್ಸಿಗೆ ಕಲ್ಲು: ಬೆಳಗಾವಿ ಘಟಕದಿಂದ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕುಡಾಳಕ್ಕೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಮೇಲೆ ಭಾನುವಾರ ಬೆಳಿಗ್ಗೆ ಕಲ್ಲು ತೂರಾಟ ನಡೆದಿದೆ.

ಬಸ್ಸಿನ ಹಿಂಬದಿಯ ಗಾಜುಗಳು ಒಡೆದಿವೆ. ಇದನ್ನು ಹೊರತುಪಡಿಸಿದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೇಲೆ ಮಹಾರಾಷ್ಟ್ರದಲ್ಲಿ ಯಾವುದೇ ರೀತಿಯ ದಾಳಿ ನಡೆದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.