ADVERTISEMENT

ಸುಖಾನಂದ ಶೆಟ್ಟಿ ಕೊಲೆ: 17 ಆರೋಪಿಗಳ ಖುಲಾಸೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST

ಮಂಗಳೂರು: 2006ರ ಡಿಸೆಂಬರ್‌ 1ರಂದು ಸುರತ್ಕಲ್‌ನ ಕುಳಾಯಿ ಹೊನ್ನಕಟ್ಟೆಯಲ್ಲಿ ನಡೆದಿದ್ದ ಬಿಜೆಪಿಯ ಪ್ರಭಾವಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ 17 ಮಂದಿಯನ್ನು ದೋಷಮುಕ್ತಗೊಳಿಸಿ ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

ಹೊನ್ನಕಟ್ಟೆಯಲ್ಲಿದ್ದ ತಮ್ಮ ಮಾರ್ಬಲ್‌ ಟ್ರೇಡಿಂಗ್ ಉದ್ದಿಮೆಯಲ್ಲಿದ್ದ ಸುಖಾನಂದ ಶೆಟ್ಟಿಅವರ ಮೇಲೆ ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ್ದ ಕ್ವಾಲಿಸ್‌ ವಾಹನವೊಂದರಲ್ಲಿ ಬಂದಿದ್ದ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸುಖಾನಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

‘ಈ ಕೊಲೆಯಲ್ಲಿ ಗುರುಪುರ ನಿವಾಸಿ ಅಕ್ಬರ್‌ ಕಬೀರ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ರೌಡಿ ಮೂಲ್ಕಿ ರಫೀಕ್‌ ಹಣದ ನೆರವು ನೀಡಿದ್ದ. ಕುಖ್ಯಾತ ಪಾತಕಿ ಮಾಡೂರು ಯೂಸೂಫ್‌ ಇವರೊಂದಿಗೆ ಕೈಜೋಡಿಸಿದ್ದ’ ಎಂದು ಸುರತ್ಕಲ್‌ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ಆರೋಪಪಟ್ಟಿಯಲ್ಲಿ 23 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಈ ಪೈಕಿ ಮೂಲ್ಕಿ ರಫೀಕ್‌ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಹಾಗೂ ಬುಲೆಟ್‌ ಸುಬೀರ್‌ ಅಲಿಯಾಸ್‌ ಅತೀಕ್‌ ಎಂಬಾತ ಕುಂದಾಪುರ ಬಳಿ ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು. ಮಾಡೂರು ಯೂಸೂಫ್‌ ಮಂಗಳೂರು ಜೈಲಿನಲ್ಲಿ ಕೊಲೆಯಾಗಿದ್ದ. ಅಕ್ಬರ್‌ ಕಬೀರ್‌ ಗುರುಪುರದ ಬಳಿ ಕೊಲೆಯಾಗಿದ್ದ. ಇಬ್ಬರು ತಲೆಮರೆಸಿಕೊಂಡಿದ್ದಾರೆ.

ನವಾಝ್‌, ನೌಷಾದ್‌, ಶಾಕೀರ್‌, ಮೊಹಮ್ಮದ್‌ ಅಜೀಝ್‌, ಮೊಹಮ್ಮದ್ ರಫೀಕ್, ಅಬ್ದುಲ್ ಖಾದರ್ ಅಲಿ, ಪಿ.ಕೆ.ಅಯ್ಯೂಬ್‌, ಮೊಹಮ್ಮದ್ ಅಶ್ರಫ್‌, ಫಾತಿಮಾ ಝೊಹರಾ, ಸಲೀಂ, ಖಲಂದರ್‌ ಬಜ್ಪೆ, ರೆಹಮತ್ ಖಲಂದರ್‌, ಅಜೀಝ್‌ ಅಲಿಯಾಸ್‌ ಯುರೋಪಿಯನ್‌ ಅಜೀಝ್‌, ನಿಜಾಮುದ್ದೀನ್‌, ಮೊಹಮ್ಮದ್ ಅಲಿಯಾಸ್ ಸಾದಾ ಮೊಹಮ್ಮದ್, ಅಫ್ರೋಝ್‌, ನಾಸಿರ್‌ ಎಂಬುವವರನ್ನು ಕೊಲೆಯಲ್ಲಿ ಭಾಗಿಯಾದ ಆರೋಪದಿಂದ ಖುಲಾಸೆಗೊಳಿಸಿ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ಬುಧವಾರ ಆದೇಶ ಹೊರಡಿಸಿದರು.

ಆಗಿನ ದಕ್ಷಿಣ ಕನ್ನಡ ಎಸ್‌ಪಿ ಬಿ.ದಯಾನಂದ ನೇರ ಉಸ್ತುವಾರಿಯಲ್ಲಿ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ಪ್ರಸನ್ನ ಪ್ರಕರಣದ ತನಿಖೆ ನಡೆಸಿದ್ದರು. ಹಲವು ದಿನಗಳ ಬಳಿಕ 17 ಮಂದಿಯನ್ನು ಬಂಧಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಕಳವು ಮಾಡಿದ್ದ ವಾಹನಕ್ಕೆ ನಕಲಿ ನೋಂದಣಿ ಸಂಖ್ಯೆಯ ಫಲಕ ಅಳವಡಿಸಿ ಕೃತ್ಯಕ್ಕೆ ಬಳಸಿರುವುದು ಗೊತ್ತಾಗಿತ್ತು. ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದವರ ಪೈಕಿ 72 ಸಾಕ್ಷಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಇದೇ ಕಾರಣಕ್ಕಾಗಿ 17 ಆರೋಪಿಗಳನ್ನೂ ಖುಲಾಸೆಗೊಳಿಸುವ ತೀರ್ಮಾನವನ್ನು ಪ್ರಕಟಿಸಿತು. ವಕೀಲ ಬಿ.ನಾರಾಯಣ ಆರೋಪಿಗಳ ಪರ ವಾದಿಸಿದ್ದರು.

ಘರ್ಷಣೆಗೆ ಕಾರಣವಾಗಿದ್ದ ಪ್ರಕರಣ
ಸುಖಾನಂದ ಶೆಟ್ಟಿ ಕೊಲೆ ಪ್ರಕರಣ ಕರಾವಳಿ ಜಿಲ್ಲೆಗಳಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಈ ಕೊಲೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 2006ರ ಡಿಸೆಂಬರ್‌ ತಿಂಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಕೊಲೆಯಾದ ಸುಖಾನಂದ ಮೂಲ್ಕಿ ಪುರಸಭೆಯ ಸದಸ್ಯರಾಗಿದ್ದು, ಬಿಜೆಪಿಯ ಪ್ರಭಾವಿ ಮುಖಂಡನಾಗಿದ್ದರು. ಮೃತದೇಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಎಸ್‌ಪಿ ಅಂಗರಕ್ಷಕ ಹಾರಿಸಿದ ಗುಂಡಿಗೆ ಅವರ ಇಬ್ಬರು ಬೆಂಬಲಿಗರು ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.