ADVERTISEMENT

ಸುಬ್ರಮಣ್ಯಸ್ವಾಮಿ ದೇಗುಲದಲ್ಲಿ ಮಡೆಸ್ನಾನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ಚಿಕ್ಕಬಳ್ಳಾಪುರ: ಚಂಪಾ ಷಷ್ಠಿ ಪ್ರಯುಕ್ತ ನಗರದ ಸುಬ್ಬರಾಯನಪೇಟೆ ಸುಬ್ರಮಣ್ಯಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ನಿರಾತಂಕವಾಗಿ ಮಡೆ ಮಡೆಸ್ನಾನ ನಡೆಯಿತು.

ಮಡೆ ಮಡೆಸ್ನಾನದ ವಿಷಯವು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ನಗರದಲ್ಲಿ ಮಡೆ ಮಡೆಸ್ನಾನ ನಡೆಯುವ ಸಾಧ್ಯತೆ ಕಡಿಮೆ ಎಂದೂ ಭಾವಿಸಲಾಗುತಿತ್ತು. ಆದರೆ ಯಾವುದೇ ರೀತಿಯ ಅಡತಡೆಯಿಲ್ಲದೆ ದೇವಾಲಯದ ಆವರಣದಲ್ಲಿ ಮಡೆಸ್ನಾನ ನೆರವೇರಿತು.

ಒಂದು ವರ್ಷದ ಮಗುವಿನಿಂದ 70 ವರ್ಷದ ವೃದ್ಧರವರೆಗೆ ಎಲ್ಲರೂ ಮಡೆಸ್ನಾನದಲ್ಲಿ ಪಾಲ್ಗೊಂಡರು. ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ಉಂಡ ಎಂಜಲು ಎಲೆಗಳ ಮೇಲೆ ಉರುಳಾಡಿದರು. ಪುಟ್ಟ ಮಕ್ಕಳನ್ನೂ ಅವರ ಪೋಷಕರು ಮಡೆಸ್ನಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಒಂದು ವರ್ಷದ ಕಂದಮ್ಮಗಳು ಅಳುತ್ತಿದ್ದರೂ ಪೋಷಕರು ಕೆಲ ನಿಮಿಷಗಳವಾದರೂ ಎಂಜಲು ಎಲೆಗಳ ಮೇಲೆ ಉರುಳಾಡಿಸಿರು.

`ಪ್ರತಿ ವರ್ಷ ಇಲ್ಲಿಯೂ ಮಡೆಸ್ನಾನ ನಿರಾತಂಕವಾಗಿ ನಡೆಯುತ್ತದೆ. ಯಾವುದೇ ರೀತಿಯ ಅಡ್ಡಿ- ಆತಂಕವಿಲ್ಲ. ಮೊದಲ ಪಂಕ್ತಿಯಲ್ಲಿ ಕೂತವರ ಊಟ ಪೂರ್ಣಗೊಳ್ಳಲು ಭಕ್ತಾದಿಗಳು ಕಾಯುತ್ತಿರುತ್ತಾರೆ. ಊಟ ಪೂರ್ಣಗೊಂಡ ಕೂಡಲೇ ಉಂಡ ಎಂಜಲು ಎಲೆಯ ಮೇಲೆ ಉರುಳಾಡುತ್ತಾರೆ. ಬಳಿಕ ಅವುಗಳನ್ನೇ ತಲೆಗಳ ಮೇಲೆ ಇಟ್ಟುಕೊಳ್ಳುತ್ತಾರೆ. ಎಲೆಗಳ ಎಂಜಲು ಮೈಮೇಲೆ ಸುರಿಯುತ್ತಿದ್ದರೂ ಭಕ್ತಾದಿಗಳು ಎಲೆಗಳನ್ನು ಹಾಗೆಯೇ ಹೊತ್ತು ತಂದು ದೇವಾಲಯದ ಆವರಣದ ಹೊರಕ್ಕೆ ಎಸೆಯುತ್ತಾರೆ' ಎಂದು ದೇವಾಲಯದ ಅರ್ಚಕರು ತಿಳಿಸಿದರು.

`ಉಂಡ ಎಂಜಲು ಎಲೆಗಳ ಮೇಲೆ ಉರುಳಾಡಿ, ದೇವರಿಗೆ ಪ್ರಾರ್ಥಿಸಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ. ಬೇಗನೇ ಮದುವೆಯಾಗಲಿ ಎಂದು ಕೆಲವರು ಹರಿಸಿದರೆ, ಇನ್ನೂ ಕೆಲವರು ಉತ್ತಮ ಉದ್ಯೋಗಕ್ಕಾಗಿ ಪ್ರಾರ್ಥಿಸುತ್ತಾರೆ. ಹೀಗಾಗಿ ಹಲವು ವರ್ಷಗಳಿಂದ ನಿರಾತಂಕವಾಗಿ ಮಡೆ ಸ್ನಾನ ನಡೆದುಕೊಂಡು ಬಂದಿದೆ' ಎಂದು ಅವರು ಹೇಳಿದರು.

ಮಡೆಸ್ನಾನದಲ್ಲಿ ಪಾಲ್ಗೊಳ್ಳಲು ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮಡೆಸ್ನಾನಕ್ಕೂ ಮುನ್ನ ದೇವಾಲಯದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.