ADVERTISEMENT

ಸುಳ್ಳು ಕೇಸ್‌ ದಾಖಲಿಸಲು ಷಡ್ಯಂತ್ರ: ಅನಂತಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಸುಳ್ಳು ಕೇಸ್‌ ದಾಖಲಿಸಲು ಷಡ್ಯಂತ್ರ: ಅನಂತಕುಮಾರ್‌
ಸುಳ್ಳು ಕೇಸ್‌ ದಾಖಲಿಸಲು ಷಡ್ಯಂತ್ರ: ಅನಂತಕುಮಾರ್‌   

ಬೆಂಗಳೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ನನ್ನ ವಿರುದ್ಧ ರಾಜಕೀಯ ದುರುದ್ದೇಶದಿಂದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮೂಲಕ ಸುಳ್ಳು ಕೇಸ್‌ ದಾಖಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಷಡ್ಯಂತ್ರ ನಡೆಸಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ದೂರಿದ್ದಾರೆ.

ಬಿಜೆಪಿ ವರಿಷ್ಠರಿಗೆ ಕಪ್ಪ ಕಾಣಿಕೆ ನೀಡಲಾಗಿದೆ ಎಂಬ ಮಾತುಕತೆಯ ಸಿ.ಡಿ ಅಸಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್‌ಎಲ್) ನೀಡಿರುವ ವರದಿಯ ಬಗ್ಗೆ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯಾವುದೇ ಕೇಸ್‌ ಹಾಕಿದರೂ ಹೆದರುವುದಿಲ್ಲ ಎಂದು ಹೇಳಿದರು.

ಎಸಿಬಿ ಮತ್ತು ಎಫ್ಎಸ್‌ಎಲ್ ಗಳನ್ನು ರಾಜಕೀಯ ವಿರೋಧಿಗಳ ವಿರುದ್ಧ ದಾಳವಾಗಿ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ. ಅವರ ಅವ್ಯವಹಾರ, ಅಹಂಕಾರವನ್ನು ವಿರೋಧಿಸಿದವರ ವಿರುದ್ಧ ತನಿಖಾ ಸಂಸ್ಥೆಯನ್ನು ಛೂ ಬಿಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ADVERTISEMENT

‘ನನ್ನ ಮತ್ತು ಯಡಿಯೂರಪ್ಪ ನಡುವಿನ ಮಾತುಕತೆಯ ಸಿ.ಡಿಯನ್ನು ಪೂರ್ಣವಾಗಿ ಆಲಿಸಲಿ. ಮಾತುಕತೆಯ ಒಂದು ಭಾಗವನ್ನು ತಮಗೆ ಬೇಕಾದಂತೆ ತಿರುಚಿದ್ದಾರೆ’ ಎಂದು ದೂರಿದರು.

‘ಸಿದ್ದರಾಮಯ್ಯ, ಅವರ ಕುಟುಂಬದ ಸದಸ್ಯರು ಮತ್ತು ಸಚಿವ ಸಂಪುಟ ಸದಸ್ಯರ ಮೇಲಿನ ಭ್ರಷ್ಟಾಚಾರದ ಪ್ರಕರಣಗಳನ್ನು ಮುಚ್ಚಿ ಹಾಕಿ ಅಷ್ಟೇ ತ್ವರಿತಗತಿಯಲ್ಲಿ ವರದಿ ಪಡೆಯುತ್ತಾರೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಯ ಸಿ.ಡಿ ಸತ್ಯಾಸತ್ಯತೆ ಪರಿಶೀಲಿಸಲು ಇವರಿಗೆ ಒಂದು ವರ್ಷ ಬೇಕಾಯಿತು. ಅನುಪಮಾ ಶೆಣೈ ಧ್ವನಿ ಮುದ್ರಿಕೆ ಸಿ.ಡಿ ಅಧ್ಯಯನಕ್ಕೆ ಎರಡು ವರ್ಷಗಳು ಬೇಕು. ಆದರೆ, ತಿರುಚಿದ ಸಿ.ಡಿ ವರದಿ ಪಡೆಯಲು ಇವರಿಗೆ ಎಲ್ಲಿಲ್ಲದ ತರಾತುರಿ’ ಎಂದು ಹರಿಹಾಯ್ದರು.

‘ಈ ಪ್ರಕರಣವನ್ನು ವಿಧಾನಮಂಡಲದಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ನ್ಯಾಯಾಲಯದಲ್ಲಿ ಎದುರಿಸಲು ಸಿದ್ಧರಿದ್ದೇವೆ. ಸಿದ್ದರಾಮಯ್ಯ ಅವರ ಬೆದರಿಕೆ ತಂತ್ರಗಳಿಗೆ ಮಣಿಯುವುದಿಲ್ಲ’ ಎಂದೂ ಅನಂತಕುಮಾರ್‌ ಹೇಳಿದರು.

ಕಾಂಗ್ರೆಸ್‌ ಕೊಳಕು ತಂತ್ರ : ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ನ ಕೊಳಕು ತಂತ್ರ ವಿಭಾಗ (ಡರ್ಟಿ ಟ್ರಿಕ್ಸ್‌ ಡಿಪಾರ್ಟ್‌ಮೆಂಟ್‌) ವಿರೋಧಿಗಳ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದೆ ಎಂದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಷಾ ಬಗ್ಗೆ ವೆಬ್‌ಪೋರ್ಟಲ್‌ನಲ್ಲಿ ಸುಳ್ಳು ವರದಿ ಪ್ರಕಟಿಸಿದೆ. ಅದರ ಬಗ್ಗೆ ಕಾಂಗ್ರೆಸ್ ವಕ್ತಾರ ಕಪಿಲ್‌ ಸಿಬಲ್‌ ಮತ್ತು ಉಳಿದ ನಾಯಕರು ಅಪ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.