ADVERTISEMENT

ಸೆ. 19ರ ಒಳಗೆ ಅಂತಿಮ ವರದಿ ಸಲ್ಲಿಸಲು ಸೂಚನೆ

ಮಡಿಕೇರಿಯಲ್ಲಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2016, 19:31 IST
Last Updated 5 ಆಗಸ್ಟ್ 2016, 19:31 IST
ಎಂ.ಕೆ.ಗಣಪತಿ
ಎಂ.ಕೆ.ಗಣಪತಿ   

ಮಡಿಕೇರಿ: ‘ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆಯ ಅಂತಿಮ ವರದಿಯನ್ನು ಸೆಪ್ಟೆಂಬರ್‌ 19ರ ಒಳಗೆ ಸಲ್ಲಿಸುವಂತೆ ಮಡಿಕೇರಿ ಜೆಎಂಎಫ್‌ ನ್ಯಾಯಾಲಯವು ಶುಕ್ರವಾರ ಸಿಐಡಿ ತಂಡಕ್ಕೆ ಸೂಚಿಸಿತು.

ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯು ಸಿಐಡಿ ಉನ್ನತ ಅಧಿಕಾರಿಗಳ ಮೇಲುಸ್ತುವಾರಿಯಲ್ಲೇ ನಡೆಯಬೇಕು ಎಂದು ಹೈಕೋರ್ಟ್‌ ಸೂಚಿಸಿರುವ ಕಾರಣ ನಗರಕ್ಕೆ ಬಂದ ಸಿಐಡಿ ಅಧಿಕಾರಿಗಳು, ಮೂವರ ವಿರುದ್ಧ ನಗರ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಪ್ರತಿಯನ್ನು ಪಡೆದುಕೊಂಡರು.

ಆ ಬಳಿಕ ಸಿಐಡಿ ಡಿವೈಎಸ್‌ಪಿ ಇ.ಬಿ.ಶ್ರೀಧರ್‌ ಅವರು ಮಡಿಕೇರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹೈಕೋರ್ಟ್‌ ಆದೇಶದಂತೆ ತನಿಖೆ ಮುಂದುವರಿಸಿದ್ದು, ಕಾಲಾವಕಾಶ ನೀಡುವಂತೆ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಎದುರು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಸೆ. 19ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು. ಇದೇ ವೇಳೆ ಖಾಸಗಿ ದೂರುದಾರ ನೇಹಾಲ್‌ ಪರವಾಗಿ ಹಾಜರಿದ್ದ ವಕೀಲ ಅಮೃತ್‌ ಸೋಮಯ್ಯ ಅವರಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತು.

ಇದಕ್ಕೂ ಮೊದಲು ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಸಿಐಡಿ ತಂಡವು ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಕೆ.ಜೆ.ಜಾರ್ಜ್‌ (ಮೊದಲ ಆರೋಪಿ), ಹಿರಿಯ ಪೊಲೀಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ (ಆರೋಪಿ–2), ಎ.ಎಂ.ಪ್ರಸಾದ್‌ (ಆರೋಪಿ–3) ವಿರುದ್ಧ ಮಡಿಕೇರಿ ನ್ಯಾಯಾಲಯದ ಆದೇಶದಂತೆ ಐಪಿಸಿ 306ರ ಅಡಿ (ಆತ್ಮಹತ್ಯೆಗೆ ಪ್ರಚೋದನೆ) ದಾಖಲಾಗಿದ್ದ ಎಫ್‌ಐಆರ್‌ ಪ್ರತಿಯನ್ನು ಪಡೆದುಕೊಂಡಿತು.

ಹೈಕೋರ್ಟ್‌ ಸೂಚನೆಯಂತೆ ಮತ್ತೆ ಸಿಐಡಿ ತನಿಖೆ ಚುರುಕುಗೊಂಡಿದ್ದು, ಹೇಳಿಕೆ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಗಣಪತಿ ಪತ್ನಿ ಕೆ.ಕೆ.ಪಾವನಾ, ಪುತ್ರ ನೇಹಾಲ್‌ ಮಂಗಳೂರಿನಲ್ಲಿ ನೆಲೆಸಿದ್ದು, ಅವರ ಹೇಳಿಕೆ ಹಾಗೂ ಮನೆ ತಪಾಸಣೆ ನಡೆಸಲು ಸಿಐಡಿ ಅಧಿಕಾರಿಗಳು ಅಲ್ಲಿಗೆ ತೆರಳುವ ಸಾಧ್ಯತೆಯಿದೆ.

ಸ್ಥಳೀಯ ಪೊಲೀಸರು ಗಣಪತಿ ತಂದೆ ಕುಶಾಲಪ್ಪ ಹೇಳಿಕೆ ಆಧರಿಸಿ ಸಿಆರ್‌ಪಿಸಿ 174ರ (ಅಸಹಜ ಸಾವು) ಅಡಿ ಜುಲೈ 7ರಂದು ದಾಖಲಿಸಿಕೊಂಡಿದ್ದ ಪ್ರಕರಣ ಆಧರಿಸಿ ತನಿಖೆ ನಡೆಸಿದ್ದ ಸಿಐಡಿ ತಂಡವು ಹಿರಿಯ ಅಧಿಕಾರಿಗಳಿಗೆ ಮಧ್ಯಂತರ ವರದಿ ಸಲ್ಲಿಸಿತ್ತು. ಇದೀಗ ಮೂವರ ವಿರುದ್ಧ ಐಪಿಸಿ 306ರ ಅಡಿ ದಾಖಲಾಗಿರುವ ಪ್ರಕರಣ ಆಧರಿಸಿ ತನಿಖೆ ಮುಂದುವರಿಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

ಈ ಮಧ್ಯೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಪ್ರಕರಣವನ್ನು ಸಿಐಡಿಗೆ ವಹಿಸಿ ಹೊರಡಿಸಿದ್ದ ಆದೇಶದ ಪ್ರತಿ ಹಾಗೂ ಇದುವರೆಗೆ ನಡೆಸಿದ್ದ ಪೊಲೀಸ್‌ ತನಿಖೆಯ ಪ್ರಗತಿ ವರದಿಯನ್ನು ಗುರುವಾರವೇ ಮಡಿಕೇರಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.