ADVERTISEMENT

ಸೈಕಲ್ ತಿರುಗಿಸಿ; ಅರಮನೆ ಬೆಳಗಿಸಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಮೈಸೂರು:  ಸೈಕಲ್ ತುಳಿದು ಮೈಸೂರಿನ ಅಂಬಾವಿಲಾಸ ಅರಮನೆ ದೀಪಗಳನ್ನು ಬೆಳಗಿಸುವ `ವಿ ಸೈಕಲ್-ಮೈಸೂರು~ ಅಭಿಯಾನಕ್ಕೆ ಅರಮನೆ ಆವರಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ನಾಡಹಬ್ಬ ದಸರಾ ಉತ್ಸವ ಕಣ್ತುಂಬಿಕೊಳ್ಳಲು ಹಾಗೂ ಅರಮನೆ ನೋಡಲು ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು, ಇನ್ನು ಮುಂದೆ ಅರಮನೆ ಆವರಣದಲ್ಲಿ ಸೈಕಲ್ ತುಳಿದು ಅಂಬಾವಿಲಾಸ ಅರಮನೆಯ ವಿದ್ಯುತ್ ದೀಪಗಳನ್ನು ಬೆಳಗಿಸಬಹುದಾಗಿದೆ.

ಪರಿಸರ ಸ್ನೇಹಿ ಸೈಕ್ಲಿಂಗ್ ಉತ್ತೇಜಿಸಲು ಹಾಗೂ ಆ ಮೂಲಕ ಅರಮನೆ ದೀಪಗಳನ್ನು ಬೆಳಗಿಸಲು ಖಾಸಗಿ ಕಂಪೆನಿಯ ಸಹಭಾಗಿತ್ವದೊಡನೆ ಜಿಲ್ಲಾಡಳಿತ ಈ ಯೋಜನೆ ರೂಪಿಸಿದೆ. ಅರಮನೆಯ ವರಾಹ ಪ್ರವೇಶ ದ್ವಾರದ ಪಕ್ಕದಲ್ಲೇ 10 ಸೈಕಲ್‌ಗಳನ್ನು ಇಡಲಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರು ಸೈಕಲ್ ತುಳಿಯಬಹುದು.
`ಸೈಕಲ್ ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದಷ್ಟೇ ನಮ್ಮ ಗುರಿಯಲ್ಲ.

ಜನರಲ್ಲಿ ಸೈಕಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅರಮನೆ ಆವರಣದಲ್ಲಿ ಈಗಿರುವ ಟೈಲ್ಸ್‌ಗಳನ್ನು ಬದಲಾಯಿಸಿ, ವಿದ್ಯುತ್ ಉತ್ಪಾದನೆಗೆ ಸಹಾಯಕವಾಗುವ ಟೈಲ್ಸ್‌ಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಟೈಲ್ಸ್‌ಗಳ ಮೇಲೆ ಪ್ರವಾಸಿಗರು ನಡೆದಾಡಿದರೆ ವಿದ್ಯುತ್ ಉತ್ಪಾದನೆ ಆಗಲಿದೆ. ದೀಪಾವಳಿ ಒಳಗೆ ಇದನ್ನು ಕಾರ್ಯಗತಗೊಳಿಸಲಾಗುವುದು~ ಎಂದು ವಸ್ತ್ರದ್ ತಿಳಿಸಿದರು.

ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, `ಮೈಸೂರು ಅರಮನೆಗೆ ಪ್ರತಿ ವರ್ಷ 35 ಲಕ್ಷ ದೇಶಿ ಪ್ರವಾಸಿಗರು ಹಾಗೂ 80 ಸಾವಿರದಿಂದ 1 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಲ್ಲಿ ಕೆಲವೇ ಕೆಲವರು ಹತ್ತು ನಿಮಿಷ ಸೈಕಲ್ ತುಳಿದರೂ ಸಾಕು, ಅರಮನೆಯ ವಿದ್ಯುತ್ ದೀಪಗಳನ್ನು ಖರ್ಚಿಲ್ಲದೇ ಬೆಳಗಿಸಬಹುದು~ ಎಂದು ಹೇಳಿದರು.
 

ಸೈಕಲ್ ಸಂಖ್ಯೆ ಹೆಚ್ಚಳ
`10 ಸೈಕಲ್‌ಗಳನ್ನು 10 ಗಂಟೆ ತುಳಿದರೆ 1500 ವಾಟ್ ವಿದ್ಯುತ್ ಶಕ್ತಿ ಉತ್ಪಾದನೆ ಆಗುತ್ತದೆ. ಇದರಿಂದ ಒಂದು ಸಾವಿರ ವಿದ್ಯುತ್ ದೀಪಗಳನ್ನು ಒಂದು ಗಂಟೆ ಉರಿಸಬಹುದು. ಆರಂಭದಲ್ಲಿ ಸೈಕಲ್‌ನಿಂದ ಉತ್ಪಾದನೆ ಆಗುವ ವಿದ್ಯುತ್ ಅರಮನೆಯ ಜಯ ಮಾರ್ತಾಂಡ ದ್ವಾರದ ದೀಪಗಳನ್ನು ಬೆಳಗಿಸಲು ಉಪಯೋಗಿಸ ಲಾಗುತ್ತಿದೆ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಬಂದರೆ, ಮುಂದಿನ ದಿನಗಳಲ್ಲಿ ಸೈಕಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು~ 
  - ಪಿ.ಎಸ್. ವಸ್ತ್ರದ್  ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT