ADVERTISEMENT

ಸೋನಿಯಾ, ರಾಹುಲ್ ಕಾಲಿಟ್ಟೆಡೆ `ಕೈ' ಭಸ್ಮ:ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST
ಚಾಮರಾಜನಗರದಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿದರು. ಅಭ್ಯರ್ಥಿ ಎಸ್.ಸೋಮನಾಯಕ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ನೂರೊಂದು ಶೆಟ್ಟಿ ಇದ್ದಾರೆ
ಚಾಮರಾಜನಗರದಲ್ಲಿ ಬುಧವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿದರು. ಅಭ್ಯರ್ಥಿ ಎಸ್.ಸೋಮನಾಯಕ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ನೂರೊಂದು ಶೆಟ್ಟಿ ಇದ್ದಾರೆ   

ಚಾಮರಾಜನಗರ: `ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಮಾಡಿರುವ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಭಸ್ಮವಾಗಿದೆ. ರಾಜ್ಯದಲ್ಲಿಯೂ ಈ ಬಾರಿ `ಕೈ' ಭಸ್ಮವಾಗಲಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

ನಗರದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ರಾಹುಲ್ ಗಾಂಧಿಯವರ ರಾಜ್ಯ ಚುನಾವಣಾ ಪ್ರವಾಸದ ವಿರುದ್ಧ ವಾಗ್ದಾಳಿ ನಡೆಸಿದರು.

`ರಾಷ್ಟ್ರದ ಘನತೆಗೆ ಧಕ್ಕೆ ತಂದಿರುವ ಪಕ್ಷ ಯಾವುದೆಂಬುದು ಮತದಾರರಿಗೆ ಗೊತ್ತಿದೆ. ಈ ಇಬ್ಬರು ನಾಯಕರ ಪ್ರವಾಸದಿಂದ ಬಿಜೆಪಿಗೆ ಒಳ್ಳೆಯದಾಗಲಿದೆ. ಅವರು ರಾಜ್ಯದಲ್ಲಿಯೇ ಹೆಚ್ಚು ಚುನಾವಣಾ ಪ್ರಚಾರ ಮಾಡಲಿ ಎಂದು ಆಶಿಸುತ್ತೇನೆ.

ಆಗ ಭಸ್ಮಾಸುರರು ಯಾರೆಂಬುದು ಗೊತ್ತಾಗುತ್ತದೆ. ಇದರಿಂದ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ದಾರಿ ಸುಗಮವಾಗಲಿದೆ' ಎಂದರು. 

ಉತ್ತರ ಪ್ರದೇಶ, ಗುಜರಾತಿನಲ್ಲೂ ಸೋನಿಯಾ, ರಾಹುಲ್ ಪ್ರಚಾರ ಮಾಡಿದರು. ಆದರೆ, ಆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿಲ್ಲ. ಈಗ ರಾಹುಲ್ ಅಭಿವೃದ್ಧಿ ಪರವಾದ ಆಡಳಿತ ನೀಡುವುದಾಗಿ ಹೇಳುತ್ತಿದ್ದಾರೆ. ನೀರಾವರಿ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. 

ಆದರೆ, ಕೃಷ್ಣಾ, ಕಾವೇರಿ ಕಣಿವೆ ಪ್ರದೇಶದ ಯೋಜನೆಗಳಿಗೆ  5 ಸಾವಿರ ಕೋಟಿ ರೂಪಾಯಿ  ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿತ್ತು. ನಯಾಪೈಸೆ ಬಿಡುಗಡೆ ಮಾಡಲಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.