
ರಟ್ಟೀಹಳ್ಳಿ (ಹಾವೇರಿ): ಮೆಣಸಿನಕಾಯಿ ಬೀಜ ಸಂಶೋಧನಾ ಕೇಂದ್ರಕ್ಕಾಗಿ 48 ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಮರಳಿಸುವಂತೆ ಇಲ್ಲಿನ ರೈತ ಕುಟುಂಬವೊಂದು ಆಗ್ರಹಿಸಿದೆ.
ಭೂಮಿ ಪಡೆದ ಮೊದಲ ಮೂರು ವರ್ಷ ಮಾತ್ರ ಇಲ್ಲಿ ಬೀಜೋತ್ಪಾದನೆ ನಡೆದಿತ್ತು. ಆಮೇಲೆ ನಿಗದಿತ ಉದ್ದೇಶಕ್ಕೆ ಭೂಮಿ ಬಳಕೆಯಾಗಿಲ್ಲವಾದ ಕಾರಣ ಭೂಮಿ ನೀಡಿದ್ದ ತಮಗೇ ಅದನ್ನು ಮರಳಿಸಬೇಕು ಎಂದು ಒತ್ತಾಯಿಸಿರುವ ರೈತ ಕುಟುಂಬ, ಬುಧವಾರ ಇಲ್ಲಿನ ಬೀಜೋತ್ಪಾದನಾ ಕೇಂದ್ರದಲ್ಲಿನ ಹೊಲದ ಉಳುಮೆ ಮಾಡಿದೆ.
ಇಲ್ಲಿನ ಬೀಜೋತ್ಪಾದನಾ ಕೇಂದ್ರದಲ್ಲಿ ಮೆಣಸಿನಕಾಯಿ ಬೀಜ ಸಂಶೋಧನಾ ಕೇಂದ್ರ ಪ್ರಾರಂಭಿಸಲು 1967ರಲ್ಲಿ ರೈತರಿಂದ ಸರ್ವೆ ನಂಬರ್ 87/1ಎ, 1ಬಿ, 1ಸಿ, 1ಡಿ ಮತ್ತು 88ರಲ್ಲಿ ಅಂದಾಜು 28 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಕಟ್ಟೇಕಾರ ಕುಟುಂಬದವರಿಗೆ ಸೇರಿದ ಈ ಭೂಮಿಯಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸುವ ಉದ್ದೇಶವಿತ್ತಾದರೂ ಇಷ್ಟು ವರ್ಷಗಳಾದರೂ ಕೇಂದ್ರ ಸ್ಥಾಪನೆಯಾಗದಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
‘ಪ್ರಸ್ತುತ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಹುನ್ನಾರ ನಡೆದಿದೆ. ಬೇರೆಯವರಿಗೆ ಮಾರಾಟ ಮಾಡುವ ಬದಲಿಗೆ ಅದನ್ನು ಹೊಲದ ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು’ ಎಂದು ಪರಮೇಶ್ವರಪ್ಪ ಕಟ್ಟೇಕಾರ ಆಗ್ರಹಿಸಿದರು.
‘ನಮ್ಮ ಕುಟುಂಬದವರು ಈಗ ಹೊಲ–ಮನೆ ಇಲ್ಲದೇ ಬೀದಿಗೆ ಬಿದ್ದಿದ್ದಾರೆ. ಜಮೀನನ್ನು ಅವರಿಗೆ ಮರಳಿಸಿದರೆ ಆ ಕುಟುಂಬಕ್ಕೂ ಒಳ್ಳೆಯದಾಗುತ್ತದೆ’ ಎಂದೂ ಅವರು ಹೇಳಿದರು.
ಬೀಜೋತ್ಪಾದನಾ ಕೇಂದ್ರದ ವ್ಯವಸ್ಥಾಪಕ ಹಾಗೂ ಸಹಾಯಕ ಕೃಷಿ ಅಧಿಕಾರಿ ಎಸ್.ಎಂ.ಕೇರಿ, ‘ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ಆದೇಶದಂತೆ ನಡೆದುಕೊಳ್ಳಲಾಗುವುದು’ ಎಂದರು.
*
ಬೀಜ ಸಂಶೋಧನಾ ಕೇಂದ್ರ ಸ್ಥಾಪಿಸದ ಹಿನ್ನೆಲೆಯಲ್ಲಿ ಹೊಲವನ್ನು ಮೂಲ ಮಾಲೀಕರಿಗೆ ಕೊಡಬೇಕು. ಜಮೀನು ಮಾರಾಟ ಮಾಡದಂತೆ ತಡೆಯಬೇಕು.
-ಪರಮೇಶ್ವರ ಕಟ್ಟೇಕಾರ,
ರೈತ
*
ಇಲ್ಲಿಯವರೆಗೂ ಸಮಸ್ಯೆ ಉದ್ಭವವಾಗಿರಲಿಲ್ಲ. ದಾಖಲೆಗಳ ಪ್ರಕಾರ ಜಮೀನು ಇಲಾಖೆಗೆ ಸೇರಿದೆ. ಈ ಸಂಬಂಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
-ಎಸ್.ಎಂ.ಕೇರಿ,
ಸಹಾಯಕ ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.