ADVERTISEMENT

ಸ್ಫೋಟಕ ಪತ್ತೆ: ಆರೋಪಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 20:31 IST
Last Updated 11 ಜೂನ್ 2018, 20:31 IST

ರಾಮನಗರ: ಚನ್ನಪಟ್ಟಣದಲ್ಲಿ ಸ್ಫೋಟಕ ವಸ್ತುಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆಯು ಸೋಮವಾರ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಆರಂಭಗೊಂಡಿತು.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ಟಿ. ನಾಸಿರ್, ಅಬ್ದುಲ್ ಕಲೀಲ್, ಮುಜೀಬ್, ಅಬ್ದುಲ್ ಜಬ್ಬರ್, ಬದ್ರುದ್ದೀನ್, ಎಡಪನ್ ತೊಡಿಕೆ ಸರ್ಫುದ್ದೀನ್, ಎ.ಇ. ಮುನಾಫ್, ಮಹಮ್ಮದ್ ಹಾಗೂ ಸರ್ಫರಾಜ್ ನವಾಜ್ ಅವರನ್ನು ಚನ್ನಪಟ್ಟಣ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆದರೆ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳನ್ನು ಕಾರಣಾಂತರಗಳಿಂದ ನ್ಯಾಯಾಲಯದಲ್ಲಿ ಹಾಜರುಪಡಿಸಲು ಸಾಧ್ಯವಾಗದ ಕಾರಣ ನ್ಯಾಯಾಧೀಶಗೋಪಾಲಕೃಷ್ಣ ರೈ ಅವರು ವಿಚಾರಣೆಯನ್ನು ಜುಲೈ ತಿಂಗಳ 2ಕ್ಕೆ ಮುಂದೂಡಿದರು.

ADVERTISEMENT

ಪ್ರಕರಣದ ಹಿನ್ನೆಲೆ: 2008ನೇ ಜುಲೈ 24ರಂದು ಚನ್ನಪಟ್ಟಣದ ಕುವೆಂಪುನಗರ ಬಡಾವಣೆಯ 11ನೇ ಕ್ರಾಸ್ ಬಳಿ ಸ್ಫೋಟ ಸಂಭವಿಸಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದವು. ಇದರಿಂದಾಗಿ ಇಡೀ ಪಟ್ಟಣವೇ ಬೆಚ್ಚಿಬಿದ್ದಿತ್ತು.

ಪ್ರಕರಣದ ತನಿಖೆ ನಡೆಸಲು ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಆದರೆ ಪ್ರಕರಣವನ್ನು ಬೇಧಿಸಲು ಚನ್ನಪಟ್ಟಣ ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಇದೇ ಸಮಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯೂ ಸ್ಫೋಟ ಸಂಭವಿಸಿತ್ತು.
ಅಲ್ಲಿ ಸಂಭವಿಸಿದ ಸ್ಫೋಟಕ್ಕೂ ಹಾಗೂ ಚನ್ನಪಟ್ಟಣದ ಬಳಿ ದೊರೆತ ಸ್ಫೋಟಕ ವಸ್ತುಗಳಿಗೂ ಸಾಮ್ಯತೆ ಕಂಡುಬಂದಿತ್ತು.

ಬೆಂಗಳೂರಿನ ವಿಶೇಷ ತನಿಖಾ ತಂಡವು ಕಡೆಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬಾಂಬ್ ಸ್ಫೋಟಿಸಿದ್ದ ಆರೋಪಿಗಳನ್ನು ಬಂಧಿ
ಸಿತ್ತು.

ಇದೇ ಆರೋಪಿಗಳು ಚನ್ನಪಟ್ಟಣದಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.