ADVERTISEMENT

ಸ್ಫೋಟ: ಆರೋಪಿಗಳ ಖುಲಾಸೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಹುಬ್ಬಳ್ಳಿ: ನಗರದ ಜೆಎಂಎಫ್‌ಸಿ ಒಂದನೇ ನ್ಯಾಯಾಲಯದ ಸಭಾಂಗಣದಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪ ಹೊತ್ತಿದ್ದ ಬಜರಂಗದಳದ ಕಾರ್ಯಕರ್ತರೆನ್ನಲಾದ ನಾಲ್ವರು ಸಹಿತ ಎಲ್ಲ ಐದು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಬಾಗಲಕೋಟೆಯ ರಮೇಶ ಪವಾರ, ಬೆಳಗಾವಿಯ ಬಸವರಾಜ್ ರೂಗಿ, ವಿಜಾಪುರದ ಹನುಮಂತ ಸೈನಸಾಕಳೆ, ಚನ್ನಬಸಪ್ಪ ಹುಣಸಗಿ ಮತ್ತು ಹುಸೇನಸಾಬ್ ಮಿರಜಕರ ಅವರನ್ನು ನ್ಯಾಯಾಲಯ ಆರೋಪಮುಕ್ತರನ್ನಾಗಿಸಿದೆ. ಈ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿದ್ದ ಬಾಗಲಕೋಟೆಯ ನಾಗರಾಜ ಜಂಬಗಿ ವಿಜಾಪುರ ಜೈಲಿನಲ್ಲಿದ್ದ ವೇಳೆ ಕೈದಿಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಸಾವಿಗೀಡಾಗಿದ್ದ.

ನಿಷೇಧಿತ ಸಿಮಿ ಸಂಘಟನೆಯ ಕಾರ್ಯಕರ್ತರನ್ನು 2008 ಮೇ 10ರಂದು ಜೆಎಂಎಫ್‌ಸಿ ಒಂದನೇ ನ್ಯಾಯಾಲಯದಲ್ಲಿ ಹಾಜರುಪಡಿಸುವ ಮಾಹಿತಿ ಹೊಂದಿದ್ದ ಈ ಆರೋಪಿಗಳು ನ್ಯಾಯಾಲಯದ ಒಳಗೇ ಬಾಂಬ್ ಸ್ಫೋಟಿಸಿ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪ ಹೊತ್ತಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಉಪನಗರ ಮತ್ತು ವಿದ್ಯಾನಗರ ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಆದೇಶಿಸಿದರು. ಸರ್ಕಾರದ ಪರ ಸಿ.ಎಸ್. ಪಾಟೀಲ ವಾದಿಸಿದ್ದರು. ಆರೋಪಿಗಳ ಪರ ಮೆಹಬೂಬ್ ಎಸ್.ಹಳ್ಳಿ, ವಿ.ಪಿ.ಭಟ್, ರಾಮಚಂದ್ರ ಮಟ್ಟಿ ವಾದಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.