ADVERTISEMENT

ಸ್ವತಂತ್ರಸಂಸ್ಥೆ ತನಿಖೆಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 19:30 IST
Last Updated 20 ಏಪ್ರಿಲ್ 2012, 19:30 IST
ಸ್ವತಂತ್ರಸಂಸ್ಥೆ ತನಿಖೆಗೆ ಶಿಫಾರಸು
ಸ್ವತಂತ್ರಸಂಸ್ಥೆ ತನಿಖೆಗೆ ಶಿಫಾರಸು   

ಬೆಂಗಳೂರು: ಜಿಂದಾಲ್ ಸಮೂಹದ ಸೌತ್ ವೆಸ್ಟ್ ಮೈನಿಂಗ್ ಕಂಪೆನಿ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ನಡೆಸಿರುವ ಶಂಕಾಸ್ಪದ ಭೂ ವ್ಯವಹಾರ, ಈ ಕಂಪೆನಿಯಿಂದ ಪ್ರೇರಣಾ ಶೈಕ್ಷಣಿಕ ಟ್ರಸ್ಟ್‌ಗೆ ದೇಣಿಗೆ ಸಂದಾಯ ಮತ್ತು ಗಣಿ ಉದ್ಯಮಿ ಪ್ರವೀಣ್‌ಚಂದ್ರ ಅವರಿಂದ ಹಣ ಪಡೆದಿರುವ ಆರೋಪಗಳ ಕುರಿತು ಸಿಬಿಐನಂತಹ ಸ್ವತಂತ್ರ ಸಂಸ್ಥೆಗಳಿಂದ ತನಿಖೆಗೆ ಆದೇಶಿಸುವಂತೆ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸು ಮಾಡಿದೆ.

ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್) ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸಿಇಸಿ ಶುಕ್ರವಾರ 17 ಪುಟಗಳ ವರದಿ ಮತ್ತು ನಾಲ್ಕು ಸಂಪುಟಗಳಷ್ಟು ದಾಖಲೆಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿರುವ ಮೂರು ಪ್ರಕರಣಗಳಲ್ಲಿ ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸುವ ಅಗತ್ಯವಿದೆ ಎಂಬ ಶಿಫಾರಸು ವರದಿಯಲ್ಲಿದೆ.

ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಮತ್ತು ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ನಡುವಿನ ವ್ಯವಹಾರ, ಬೇಲೆಕೇರಿ ಬಂದರಿನಲ್ಲಿ ಅದಿರು ನಾಪತ್ತೆ ಪ್ರಕರಣ ಹಾಗೂ ರಾಜ್ಯದಲ್ಲಿ ಗಣಿಗಾರಿಕೆ ನಿಷೇಧದ ನಡುವೆಯೂ ಆಂಧ್ರಪ್ರದೇಶದ ಕೃಷ್ಣಪಟ್ಟಣ ಬಂದರಿನಿಂದ ಕರ್ನಾಟಕ ಮೂಲದ ಅದಿರು ರಫ್ತಾಗಿರುವ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಹಿರೇಮಠ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿದ್ದರು.

ಲೋಕಾಯುಕ್ತದ ಉನ್ನತ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನೂ ರದ್ದು ಮಾಡುವಂತೆ ಮನವಿ ಮಾಡಿದ್ದರು. ಉಳಿದ ಮೂರು ವಿಷಯಗಳ ಬಗ್ಗೆ ಪ್ರತ್ಯೇಕ ವರದಿ ನೀಡುವುದಾಗಿ ನ್ಯಾಯಾಲಯಕ್ಕೆ ಸಿಇಸಿ ತಿಳಿಸಿದೆ.

`ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರು ಹತ್ತಿರದ ಸಂಬಂಧಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಗಂಭೀರ ಸ್ವರೂಪದ ಅಕ್ರಮಗಳು ಮತ್ತು ಅವ್ಯವಹಾರಗಳಲ್ಲಿ ಅವರು ಭಾಗಿಯಾಗಿದ್ದಾರೆ~ ಎಂದು ಸಿಇಸಿ ಸದಸ್ಯ ಕಾರ್ಯದರ್ಶಿ ಎಂ.ಕೆ.ಜೀವರಜ್ಕ, ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಖರೀದಿಸಿರುವುದು, ಭೂ ಪರಿವರ್ತನೆ ಆದೇಶ ಪಡೆದಿರುವುದು ಮತ್ತು ಆ ಭೂಮಿಯನ್ನು ಸೌತ್‌ವೆಸ್ಟ್ ಮೈನಿಂಗ್ ಕಂಪೆನಿಗೆ ಮಾರಾಟ ಮಾಡಿರುವುದರಲ್ಲಿ ಅಧಿಕಾರ ದುರ್ಬಳಕೆ, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ತಮ್ಮ ಹತ್ತಿರದ ಸಂಬಂಧಿಗಳಿಗೆ ಲಾಭ ಮಾಡಿಕೊಡಲು ಹಿಂದಿನ ಮುಖ್ಯಮಂತ್ರಿಯವರು ಇಂತಹ ಕೃತ್ಯ ಎಸಗಿದ್ದಾರೆ ಎಂದು ಸಿಇಸಿ ಅಭಿಪ್ರಾಯಪಟ್ಟಿದೆ.

ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ಜೊತೆಗಿನ ಭೂ ವ್ಯವಹಾರ ಮತ್ತು ಆ ಅವಧಿಯಲ್ಲಿ ಜಿಂದಾಲ್ ಕಂಪೆನಿಯು ಅಕ್ರಮ ಗಣಿಗಾರಿಕೆಯ ಲಾಭ ಪಡೆದಿರುವುದಕ್ಕೆ ಸಂಬಂಧ ಇದ್ದಂತೆ ಕಾಣುತ್ತದೆ.

ಮೈಸೂರ್ ಮಿನರಲ್ಸ್ (ಎಂಎಂಎಲ್) ಗಣಿ ಗುತ್ತಿಗೆಗಳ ಸಂಬಂಧ ಜಿಂದಾಲ್ ಕಂಪೆನಿಯು ಮಾಜಿ ಮುಖ್ಯಮಂತ್ರಿಯವರಿಂದ ಅನುಕೂಲ ಪಡೆದಿರುವುದು ಕಾಣುತ್ತಿದೆ. ಈ ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಆಗಬೇಕು. ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ನಡೆಯಬೇಕು. ಪ್ರಕರಣದ ಆಳಕ್ಕಿಳಿದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ

ಯಡಿಯೂರಪ್ಪ ಅವರ ಕುಟುಂಬದ ಸದಸ್ಯರು ಸ್ಥಾಪಿಸಿದ ಪ್ರೇರಣಾ ಎಜುಕೇಷನ್ ಸೊಸೈಟಿಗೆ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ 2010ರ ಮಾರ್ಚ್‌ನಲ್ಲಿ ಎರಡು ಚೆಕ್‌ಗಳ ಮೂಲಕ ತಲಾ ಐದು ಕೋಟಿ ರೂಪಾಯಿಯಂತೆ ಒಟ್ಟು ರೂ 10 ಕೋಟಿ ದೇಣಿಗೆ ನೀಡಿದೆ. ಆದರೆ, 2009-10ರಲ್ಲಿ ಆ ಕಂಪೆನಿಯ ನಿವ್ವಳ ಲಾಭ ರೂ 5.73 ಕೋಟಿ ಮಾತ್ರ ಇತ್ತು. ಜಿಂದಾಲ್ ಸಮೂಹದ ಇತರೆ ಕಂಪೆನಿಗಳು ನೀಡಿರುವ ದೇಣಿಗೆಯ ವಿವರಗಳನ್ನು ಪರಿಶೀಲಿಸಲಾಗಿದೆ. ಯಾವುದೇ ಸಂಸ್ಥೆಗಳಿಗೂ ಇಷ್ಟೊಂದ ದೊಡ್ಡ ಮೊತ್ತದ ದೇಣಿಗೆ ಸಂದಾಯ ಆಗಿಲ್ಲ ಎಂದು ಸಿಇಸಿ ತಿಳಿಸಿದೆ. ಜಿಂದಾಲ್ ಸ್ಟೀಲ್ ಕಂಪೆನಿಯು ಅಕ್ರಮ ಗಣಿಗಾರಿಕೆಯಿಂದ ಬಂದ ಅದಿರನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿತ್ತು ಎಂಬ ಅಂಶ ಲೋಕಾಯುಕ್ತರು ಸಲ್ಲಿಸಿದ ವರದಿಯಲ್ಲಿದೆ. ಹತ್ತು ಕೋಟಿ ರೂಪಾಯಿ ದೇಣಿಗೆ ಸಂದಾಯದ ಹಿಂದೆ ಯಾವುದಾದರೂ ಕಾರಣಗಳಿವೆಯೇ ಎಂಬುದರ ಬಗ್ಗೆಯೂ ತನಿಖೆಗೆ ಆದೇಶಿಸಬೇಕು ಎಂದು ಶಿಫಾರಸು ಮಾಡಿದೆ.

ಗಣಿ ಉದ್ಯಮಿ ಪ್ರವೀಣ್‌ಚಂದ್ರ ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿ ಗುತ್ತಿಗೆಯೊಂದನ್ನು ಮಂಜೂರು ಮಾಡಲಾಗಿದೆ. ಈ ವ್ಯಕ್ತಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ರೂ 2.50 ಕೋಟಿ ಮತ್ತು ಭಗತ್ ಹೋಮ್ಸ ಪ್ರೈವೇಟ್ ಲಿಮಿಟೆಡ್‌ಗೆ ರೂ 3.50 ಕೋಟಿ ಸಂದಾಯ ಮಾಡಿದ್ದಾರೆ. ಗಣಿ ಗುತ್ತಿಗೆ ಮಂಜೂರಾತಿ ಮತ್ತು ಹಣ ಸಂದಾಯದ ನಡುವೆ ಸಂಬಂಧವಿದೆ ಎಂಬ ಆರೋಪದ ಬಗ್ಗೆಯೂ ಸಿಬಿಐನಂತಹ ತನಿಖಾ ಸಂಸ್ಥೆಯಿಂದ ತನಿಖೆ ಅಗತ್ಯ ಎಂದು ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ.

ಸಿಇಸಿ ವರದಿ ಸ್ವೀಕೃತವಾದಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸಮೂಹ, ಪ್ರವೀಣ್‌ಚಂದ್ರ ಮತ್ತು ಬಿಡಿಎ ಅಧಿಕಾರಿಗಳು ಸಿಬಿಐ ತನಿಖೆಯ ವ್ಯಾಪ್ತಿಗೆ ಸಿಲುಕುತ್ತಾರೆ.

ಅಕ್ರಮಗಳ ಸರಮಾಲೆ: ರಾಚೇನಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಮತ್ತು ಗಣಿ ಕಂಪೆನಿಗೆ ಮಾರಾಟ ಮಾಡಿರುವ ಬಗ್ಗೆ ಸಿಇಸಿ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದೆ. `ಕರ್ನಾಟಕ ಭೂ ಪರಭಾರೆ ಮತ್ತು ನಿಯಂತ್ರಣ ಕಾಯ್ದೆ, ಕರ್ನಾಟಕ ಭೂಸ್ವಾಧೀನ ಕಾಯ್ದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ಉಲ್ಲಂಘಿಸಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಮಾಜಿ ಮುಖ್ಯಮಂತ್ರಿಯವರು ತಮ್ಮ ಕುಟುಂಬದ ಸದಸ್ಯರಿಗೆ ಲಾಭ ಮಾಡಿಕೊಡಲು ವಾಮಮಾರ್ಗದ ಮೂಲಕ ಆದೇಶ ಹೊರಡಿಸಿದ್ದಾರೆ~ ಎಂದು ಸಿಇಸಿ ಹೇಳಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.