ADVERTISEMENT

ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:30 IST
Last Updated 12 ಸೆಪ್ಟೆಂಬರ್ 2011, 19:30 IST
ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ
ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ   

ಬೆಂಗಳೂರು: `ಬಡವರು, ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 10 ಸರ್ಕಾರಿ ಆಸ್ಪತ್ರೆ ಮತ್ತು 7 ವೈದ್ಯಕೀಯ ಸ್ವಾಯತ್ತ ಸಂಸ್ಥೆಗಳಿಗೆ 60 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹೃದಯ ಸಂಬಂಧಿ ಸಿ.ಟಿ. ಸ್ಕ್ಯಾನ್ ಉದ್ಘಾಟಿಸಿ ಮಾತನಾಡಿದರು.

`ಹೃದಯ ಸಂಜೀವಿನಿ ಯೋಜನೆಯಡಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸಾವಿರ ಬಡರೋಗಿಗಳಿಗೆ ಆಂಜಿಯೋಪ್ಲಾಸ್ಟ್ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಸಹಭಾಗಿತ್ವದಡಿ ಜಯದೇವ ಆಸ್ಪತ್ರೆ ಶಸ್ತ್ರಚಿಕಿತ್ಸಾ ಸೌಲಭ್ಯ ಒದಗಿಸುತ್ತಿದ್ದು ಪ್ರತಿದಿನ ಸಾವಿರಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಆಂಜಿಯೋಗ್ರಾಂ ಚಿಕಿತ್ಸೆ ನೀಡುತ್ತಿರುವುದು ಸಾಹಸವೇ ಸರಿ~ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಎಸ್. ಎ.ರಾಮದಾಸ್, `ಬಹುರಾಷ್ಟ್ರೀಯ ಕಂಪೆನಿಗಳು ದೇಶದ ಔಷಧ ಘಟಕಗಳನ್ನು ಖರೀದಿಸುವ ಹುನ್ನಾರ ನಡೆಸುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಶೇ 50ರಷ್ಟು ಕಡಿಮೆ ಬೆಲೆಗೆ ಔಷಧಗಳನ್ನು ನೀಡಲು ಸರ್ಕಾರ ಮುಂದಾಗಿದ್ದು ಜನೆರಿಕ್ ಔಷಧಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ 10 ವೈದ್ಯಕೀಯ ಕಾಲೇಜುಗಳಲ್ಲಿ ಟೆಂಡರ್ ಕರೆಯಲಾಗಿದೆ~ ಎಂದು ಹೇಳಿದರು.

`ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಬೇರೆ ಕಡೆಯ ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳನ್ನು ತೆರೆಯುವಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಡಿಜಿಟಲ್ ಗ್ರಂಥಾಲಯವನ್ನು ತೆರೆಯಲಾಗುತ್ತಿದೆ. ಎಐಸಿಟಿಇ ಮಾದರಿಯ ವೇತನವನ್ನು ಸರ್ಕಾರ ನೀಡುತ್ತಿದ್ದು ವೈದ್ಯರು, ವೈದ್ಯಕೀಯ ಪ್ರಾಧ್ಯಾಪಕರು ರೂ 85 ಸಾವಿರದವರೆಗೆ ವೇತನ ಪಡೆಯಬಹುದಾಗಿದೆ~ ಎಂದರು.

ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್. ಶಾಸಕ ಬಿ.ಎನ್.ವಿಜಯಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಚ್. ಗೋಪಾಲಕೃಷ್ಣೇಗೌಡ, ಪಾಲಿಕೆ ಸದಸ್ಯ ಮುನಿಸಂಜೀವಯ್ಯ, ಟ್ರಿನಿಟಿ ಹೃದಯ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಜಿ.ಮುರಳಿಧರ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಕೆ. ಪೂರ್ಣೇಶ್, ವೈದ್ಯಕೀಯ ಅಧೀಕ್ಷಕ ಟಿ.ಎಸ್. ಭೂಪಾಲ್ ಮತ್ತಿತರರು ಇದ್ದರು.

ರಿಯಾಯ್ತಿಯಲ್ಲಿ ಸಿ.ಟಿ. ಸ್ಕ್ಯಾನ್

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಿ.ಟಿ. ಸ್ಕ್ಯಾನ್ ರಿಯಾಯ್ತಿ ದರದಲ್ಲಿ ಲಭ್ಯವಿದೆ. ಬೇರೆ ಕಡೆಗಳಲ್ಲಿ ಹತ್ತು ಸಾವಿರ ರೂಪಾಯಿಗಿಂತಲೂ ಅಧಿಕ ಖರ್ಚಾಗುವ ಸ್ಕ್ಯಾನ್ ಸೌಲಭ್ಯ ಇಲ್ಲಿ ಕೇವಲ 4ರಿಂದ 6 ಸಾವಿರ ರೂಪಾಯಿಗಳಿಗೆ ಲಭಿಸಲಿದೆ. ಪ್ರತಿ ತಿಂಗಳು 30 ಬಡರೋಗಿಗಳಿಗೆ ಉಚಿತವಾಗಿ ಸ್ಕ್ಯಾನ್ ಮಾಡಲು ಸಂಸ್ಥೆ ನಿರ್ಧರಿಸಿದೆ.
 

ADVERTISEMENT

ಉಚಿತ ಶಸ್ತ್ರಚಿಕಿತ್ಸೆ

`ಅಕ್ಟೋಬರ್ 3ರಿಂದ ಐದು ದಿನಗಳ ಕಾಲ ಇಂಡೋ ಅಮೆರಿಕನ್ ಉಚಿತ ಆ್ಯಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 200 ಹೃದ್ರೋಗಿಗಳು ಇದರ ಲಾಭ ಪಡೆಯಬಹುದಾಗಿದ್ದು ಇದೇ 20ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು~ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮನವಿ ಮಾಡಿದರು.

`ಕಳೆದ ಬಾರಿ 175 ಮಂದಿಗೆ ಇದೇ ರೀತಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈಗ ಹೆಚ್ಚು ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಇಷ್ಟು ಬೃಹತ್ ಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಇದೇ ಮೊದಲು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.