ADVERTISEMENT

ಹರ್ಷ ತಂದ ವರ್ಷಧಾರೆ

ಸೊರಬ, ಮಂಡ್ಯ ಸೇರಿ ರಾಜ್ಯದ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 4:53 IST
Last Updated 16 ಮಾರ್ಚ್ 2018, 4:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ.

ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ರಾಜಧಾನಿಯ ಜನರಿಗೆ ಮಳೆ ತಂಪೆರೆದಿದೆ. ಸಂಜೆಯಾಗುತ್ತಿದ್ದಂತೆ ತುಂತುರು ಹನಿ ಪ್ರಾರಂಭವಾಯಿತು. ಕೆಂಗೇರಿಯಲ್ಲಿ ಅತಿ ಹೆಚ್ಚು 56.5 ಮಿ.ಮೀ ಮಳೆ ಸುರಿದಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ವರುಣನ ಆರ್ಭಟ ಹೆಚ್ಚಿತ್ತು.

ಕಾವೇರಿ ಕಣಿವೆಯ ನಾಲ್ಕು ಜಿಲ್ಲೆಗಳಲ್ಲಿ ಗುರುವಾರ ಗುಡುಗು, ಬಿರುಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಕೊಡಗು, ಹಾಸನ, ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಮಳೆಯಾಗಿದೆ.

ADVERTISEMENT

ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ, ನಾಪೊಕ್ಲು, ಮಡಿಕೇರಿ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ. ಈ ಸಮಯದಲ್ಲಿ ಮಳೆ ಸುರಿದಿರುವುದರಿಂದ ಕಾಫಿ ಹೂ ಅರಳಲು ಉತ್ತಮ ವಾತಾವರಣ ಉಂಟಾಗಿದೆ. ಇದರಿಂದ ಇಲ್ಲಿನ ರೈತರು ಸಂಭ್ರಮಿಸಿದರು.

ಮಂಡ್ಯದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆ 7ರವರೆಗೂ ಧಾರಾಕಾರವಾಗಿ ಸುರಿಯಿತು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ನೂರು ಅಡಿ ರಸ್ತೆ, ವಿ.ವಿ.ರಸ್ತೆ, ಆರ್‌.ಪಿ.ರಸ್ತೆಗಳ ಮೇಲೆ ನೀರಿನ ಹರಿವು ಹೆಚ್ಚಿತ್ತು. ಮದ್ದೂರು, ಮಳವಳ್ಳಿ, ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ ತಾಲ್ಲೂಕಿನಲ್ಲೂ ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ವರ್ಷಧಾರೆಯಾಗಿದೆ. ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ನಾಗರಹೊಳೆ ಹಾಗೂ ಬಂಡಿಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಮಳೆಯಾದ ಪರಿಣಾಮ ಕಾಳ್ಗಿಚ್ಚಿನ ಭೀತಿ ದೂರವಾಗಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಸತತ ಮೂರು ತಾಸು ಗುಡುಗು ಸಹಿತ ಭಾರಿ ವರ್ಷಧಾರೆಯಾಗಿದೆ. ಶಿಕಾರಿಪುರದಲ್ಲಿ ಕೆಲಸಮಯ ಮಳೆ ಸುರಿಯಿತು. ಭದ್ರಾವತಿ, ಮಂಡಗದ್ದೆ, ಬೆಜ್ಜವಳ್ಳಿ, ಹೊಸನಗರ, ರಿಪ್ಪನ್‌ಪೇಟೆ ಸುತ್ತಮುತ್ತಲೂ ತುಂತುರು ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೆಲವು ಕಡೆ ಬುಧವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ನಗರ, ಹೊಳಲ್ಕೆರೆ ಹಾಗೂ ಹಿರಿಯೂರಿನಲ್ಲಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಜೋರು ಮಳೆಯಾಗಿದೆ.

ಚಿಕ್ಕಮಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿದ್ದ ಮಳೆ ಇಳೆಗೆ ತಂಪೆರೆಯಿತು. ಮಧ್ಯಾಹ್ನ 3.45ರ ಹೊತ್ತಿಗೆ ಮುಸಲಧಾರೆ ಶುರುವಾಯಿತು. ತುಂತುರಿನಂತೆ ಆರಂಭವಾದ ಮಳೆ ನಂತರ ಜೋರಾಯಿತು. ಸುಮಾರು 30 ನಿಮಿಷ ಸುರಿಯಿತು.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಭಟ್ಕಳದಲ್ಲಿ ಬುಧವಾರ ರಾತ್ರಿ ಹಾಗೂ ಹಾವೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಬೆಳಿಗ್ಗೆ ಗುಡುಗು ಸಹಿತ ಮಳೆ ಸುರಿಯಿತು. ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ತುಂತುರು ಮಳೆಯಾಗಿದೆ.

ಶಿರಸಿ, ಹೊನ್ನಾವರ, ಕುಮಟಾ, ಯಲ್ಲಾಪುರ, ಸಿದ್ದಾಪುರ, ಹಳಿಯಾಳದ ಸುತ್ತಮುತ್ತ ತುಂತುರು ಮಳೆಯಾಯಿತು.

ತುಮಕೂರು ತಾಲ್ಲೂಕಿನ ತೋವಿನಕೆರೆಯಲ್ಲಿ ಸುಮಾರು ಎರಡು ಸೆಂ.ಮೀ ಮಳೆಯಾಗಿದೆ.
**
ಇನ್ನೂ ಎರಡು ದಿನ ಮಳೆ
ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ. ಮೋಡಗಳು ಪೂರ್ವಕ್ಕೆ ಚಳಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ತಿಳಿಸಿದರು.

ಅರಬ್ಬೀ ಸಮುದ್ರದ ನೈರುತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪರಿಣಾಮ ಕಡಿಮೆಯಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಗಾಳಿಯ ವೇಗವೂ ತಗ್ಗಿದೆ ಎಂದರು.
**
10 ಸಾವಿರ ಕರೆಗಳು

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರದ ವರುಣ ಮಿತ್ರ ಸಹಾಯವಾಣಿಗೆ ಮಳೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆಯಿಂದ ಗುರುವಾರ ಸುಮಾರು 10,000 ಕರೆಗಳು ಬಂದಿದೆ. ಬುಧವಾರ ಈ ಸಂಖ್ಯೆ 8,000 ಇತ್ತು ಎಂದು ಕೇಂದ್ರ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.

ಬೆಸ್ಕಾಂಗೆ ವ್ಯಾಪ್ತಿಗೆ ಬರುವ ಜಿಲ್ಲೆಗಳಿಂದ ಸುಮಾರು 3500 ಕೆರೆಗಳು ಬಂದಿವೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.