ADVERTISEMENT

ಹವ್ಯಾಸಿ ರಂಗಭೂಮಿ ಕಲಾವಿದ ರಂಗಾಚಾರ್ಯಲು ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST
ಹವ್ಯಾಸಿ ರಂಗಭೂಮಿ ಕಲಾವಿದ ರಂಗಾಚಾರ್ಯಲು ಇನ್ನಿಲ್ಲ
ಹವ್ಯಾಸಿ ರಂಗಭೂಮಿ ಕಲಾವಿದ ರಂಗಾಚಾರ್ಯಲು ಇನ್ನಿಲ್ಲ   

ಬೆಂಗಳೂರು: ಹವ್ಯಾಸಿ ರಂಗಭೂಮಿ ಕಲಾವಿದ ಕ್ಯಾಪ್ಟನ್ ಡಾ.ಆರ್.ರಂಗಾಚಾರ್ (92) ಅವರು ನಗರದಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು.

ಅವರು ಪತ್ನಿ ರಂಗಭೂಮಿ ಕಲಾವಿದೆ ವಿಮಲಾ ರಂಗಾಚಾರ್, ಪುತ್ರಿಯರಾದ ರೇವತಿ ಮತ್ತು ಆಶಾ ಗೋಪಾಲ್ ಅವರನ್ನು ಅಗಲಿದ್ದಾರೆ. ನಗರದ ಮಲ್ಲೇಶ್ವರ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿದೆ. ಜನವರಿ 4ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ. ರಂಗಾಚಾರ್ ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಭಾರತೀಯ ಸೈನ್ಯದಲ್ಲಿ ವೈದ್ಯಾಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1942ರಲ್ಲಿ ಹವ್ಯಾಸಿ ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡ ರಂಗಾಚಾರ್ ದಂಪತಿ `ಕಲಾಜ್ಯೋತಿ ಕಲಾವಿದರು~ ರಂಗ ತಂಡ ರಚಿಸಿ ಟಿ.ಪಿ.ಕೈಲಾಸಂ ಅವರ `ಗಂಡಸ್ಕತ್ರಿ~, `ಹುತ್ತದಲ್ಲಿ ಹುತ್ತ~, ಪರ್ವತವಾಣಿ ಅವರ `ಬಹದ್ದೂರ್ ಗಂಡ, `ವಿಗಡ ವಿಕ್ರಮರಾಯ~ದಂತಹ ಬಹುತೇಕ ನಾಟಕಗಳಿಗೆ ರಂಗರೂಪ ನೀಡಿ ಜನಪ್ರಿಯಗೊಳಿಸಿದ್ದರು. ರಂಗಚಾರ್ ದಂಪತಿ 1956ರಲ್ಲಿ ದೆಹಲಿಯಲ್ಲಿ ಪ್ರದರ್ಶಿಸಲ್ಪಟ್ಟ `ಅಮ್ಮಾವ್ರ ಗಂಡ~ ಕನ್ನಡ ನಾಟಕವು ಅಂದಿನ ಪ್ರಧಾನಿ ಜವಹಾರ್‌ಲಾಲ್ ನೆಹರೂ ಅವರ ಗಮನ ಸೆಳೆದಿತ್ತು.

ನಾಟಕ ಮೆಚ್ಚಿದ್ದ ನೆಹರೂ ಮರು ದಿನ ಸಂಸದರು ಮತ್ತು ಸಚಿವರಿಗಾಗಿ ಮತ್ತೊಂದು ಪ್ರದರ್ಶನ ಏರ್ಪಡಿಸಿದ್ದರು. ಇದೇ ನಾಟಕದ ಹಿಂದಿ ಅನುವಾದಿತ ರೂಪವನ್ನು ಅಂದು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.