ADVERTISEMENT

ಹಾನಗಲ್ ಶ್ರೀಗಳ ಕುರಿತ ಹೇಳಿಕೆಗೆ ಬದ್ಧ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಹಾನಗಲ್ ಶ್ರೀಗಳ ಕುರಿತ ಹೇಳಿಕೆಗೆ ಬದ್ಧ
ಹಾನಗಲ್ ಶ್ರೀಗಳ ಕುರಿತ ಹೇಳಿಕೆಗೆ ಬದ್ಧ   

ಕೂಡಲಸಂಗಮ: ‘ಹಾನಗಲ್ ಕುಮಾರ ಸ್ವಾಮಿಗಳ ಕುರಿತು ನಾನು ಹೇಳಿದ ಮಾತು ಪೂರ್ಣ ಸತ್ಯ. ಈ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸ್ಪಷ್ಟಪಡಿಸಿದ್ದಾರೆ.

‘ಕುಮಾರಸ್ವಾಮಿಗಳಿಗೆ ಸದುದ್ದೇಶ ಇದ್ದಿದ್ದರೆ ಲಿಂಗಾಯತ ಸಮಾಜದ ಸಂಘಟನೆ, ಅಭಿವೃದ್ಧಿಗಾಗಿ ಅಖಿಲ ಭಾರತ ಲಿಂಗಾಯತ ಮಹಾಸಭೆ ಸ್ಥಾಪಿಸುತ್ತಿದ್ದರು. ವೀರಶೈವರು ಇಲ್ಲದೇ ಇರುವ ಸಮಾಜದಲ್ಲಿ ವೀರಶೈವರ ಸಂಘಟನೆ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ಲಿಂಗಾಯತ ವೀರಶೈವ ಸಮಾಜವನ್ನು ಲಿಂಗಾಯತ ಪರವಾಗಿರುವವರು ಒಡೆಯುತ್ತಿದ್ದೇವೆ ಎಂದು ಜನರಲ್ಲಿ ಗೊಂದಲ ಹುಟ್ಟಿಸಲಾಗುತ್ತಿದೆ. ವೀರಶೈವ ಮಹಾಸಭೆ ಸ್ಥಾಪಿಸಿ, ಲಿಂಗಾಯತರಲ್ಲಿ ಕೆಲವರು ವೀರಶೈವರು ಎಂದುಕೊಳ್ಳುವಂತೆ ಭ್ರಾಂತಿ ಹುಟ್ಟಿಸಿದ ಕುಮಾರುಸ್ವಾಮಿಗಳೇ ಸಮಾಜ ಒಡೆದವರು. ಈಗ ನಾವು ಲಿಂಗಾಯತ ಪದವನ್ನು ಬಳಸಬೇಕೆಂದು ತಿಳಿಸಿ ಎಲ್ಲರನ್ನೂ ಒಂದುಗೂಡಿಸುತ್ತಿದ್ದೇವೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಶಿವಯೋಗ ಮಂದಿರದ ಉಪ್ಪು ಉಂಡ ಅನೇಕ ಮಠಾಧೀಶರು ನಮ್ಮ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಇಲ್ಲಿಯವರೆಗೆ ಅಲ್ಲಿ ಪ್ರವೇಶ ಮತ್ತು ತರಬೇತಿ ಪಡೆದವರಲ್ಲಿ ಜಂಗಮರನ್ನು ಹೊರತುಪಡಿಸಿ ಬೇರೆ ಯಾವ ಸಮುದಾಯದವರು ಇದ್ದಾರೆಂಬುದರ ಪಟ್ಟಿ ಕೊಡಲಿ’ ಎಂದು ಸವಾಲು ಹಾಕಿದ್ದಾರೆ.

‘ಹಾನಗಲ್ ಶ್ರೀಗಳು ವೀರಶೈವ ಧರ್ಮ, ಸಂಸ್ಕೃತಿ, ಆದರ್ಶವನ್ನು ಎತ್ತಿ ಹಿಡಿದಿದ್ದಾರೆಂದು ಬಾಳೆಹೊನ್ನೂರು ಮಠದ ರಂಭಾಪುರಿ ಸ್ವಾಮಿಗಳು ಹೇಳಿದ್ದಾರೆ. ಇದು ನೂರಕ್ಕೆ ನೂರು ಸತ್ಯ. ವೇದಾಗಮ ಶಾಸ್ತ್ರ ಪುರಾಣಗಳಿಂದ ಹೊರಬಂದು ಲಿಂಗಾಯತ ಧರ್ಮವನ್ನು ಬಸವಣ್ಣ ಸ್ಥಾಪಿಸಿದರು. ಇದರ ಪರಿಣಾಮ ಹುಟ್ಟಿದ ಸಮಾಜವನ್ನು ಪುನಃ ವೇದಾಗಮಗಳ ಗೋಜಿಗೆ ಸಿಲುಕಿಸುವ ಕೆಲಸವನ್ನು ವೀರಶೈವ ಮಹಾಸಭೆ ಸ್ಥಾಪಿಸುವ ಮೂಲಕ ಕುಮಾರಸ್ವಾಮಿಗಳು ಮಾಡಿದ್ದಾರೆ. ರೇಣುಕಾದಿ ಪಂಚಾಚಾರ್ಯರು ಮತ್ತು ಬಸವಣ್ಣನವರು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಪಂಚಾಚಾರ್ಯರು ಕಾಲ್ಪನಿಕ ಸೃಷ್ಟಿ. ಮೈಸೂರಿನಲ್ಲಿನೆಲೆಸಿದ್ದ ಕಾಶಿನಾಥ ಶಾಸ್ತ್ರಿಗಳ ಕಲ್ಪನೆಯ ಕೂಸು. ಬಸವಣ್ಣ ಐತಿಹಾಸಿಕ ಮಹಾಪುರುಷ. ಆದ್ದರಿಂದ ಪ್ರಜ್ಞಾವಂತರು ಪಂಚಾಚಾರ್ಯರನ್ನು ಐತಿಹಾಸಿಕ ವ್ಯಕ್ತಿಗಳೆಂದು ಒಪ್ಪುವುದು ಸಾಧ್ಯವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.