ADVERTISEMENT

ಹಾರುಬೂದಿ: ಸುರಕ್ಷತಾ ಕ್ರಮಕ್ಕೆ ಗಡುವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST

ಬೆಂಗಳೂರು: ಉಡುಪಿಯ ನಂದಿಕೂರು ಹಾರುಬೂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಮೊದಲನೇ ವಾರದ ಒಳಗಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗಡುವು ನೀಡಿದೆ. ಇದೇ ವೇಳೆ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಯುಪಿಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಸ್ಥಾವರದಲ್ಲಿ ಉತ್ಪಾದನೆಯಾಗುತ್ತಿರುವ ಶೇ 50 ರಷ್ಟು ಹಾರುಬೂದಿಯನ್ನು ವೈಜ್ಞಾನಿಕವಾಗಿ ಬೇರೆಡೆಗೆ ಸಾಗಿಸಬೇಕು ಹಾಗೂ ತೆಂಕ ಎರ್ಮಾಳು ಪ್ರದೇಶದಲ್ಲಿ ಒಡೆದು ಹೋದ ಪೈಪ್‌ಲೈನ್‌ಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಈಗಾಗಲೇ ಯುಪಿಸಿಎಲ್ ಅಧಿಕಾರಿಗಳಿಗೆ ಮಂಡಳಿ ಸೂಚಿಸಿದೆ. ಸುರಕ್ಷತೆಗೆ ಒತ್ತು ನೀಡದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ. 

ನವೆಂಬರ್‌ನಿಂದ ಈಚೆಗೆ ಅಂದಾಜು 25 ಸಾವಿರ ಟನ್ ಹಾರುಬೂದಿಯನ್ನು ಸುರಕ್ಷಿತ ವಲಯಕ್ಕೆ ಸಾಗಿಸಬೇಕಿದ್ದ ಯುಪಿಸಿಎಲ್ ಇದುವರೆಗೆ ಕೇವಲ 700 ಟನ್‌ನಷ್ಟು ಬೂದಿಯನ್ನು ಸಾಗಿಸಿರುವುದು ಹಾಗೂ ನಂದಿಕೂರಿನಲ್ಲಿರುವ ಬೂದಿಕೊಳದಲ್ಲಿ ಕೇವಲ ತಳಬೂದಿ (ಬಾಟಮ್ ಆಶ್)ಯನ್ನು ಮಾತ್ರ ಹೂಳಲು ಅವಕಾಶ ಇದ್ದು ಇಲ್ಲಿ ಸ್ವಲ್ಪಮಟ್ಟಿಗೆ ಹಾರುಬೂದಿ ಮಿಶ್ರಣವಾಗಿರುವುದು ಮಂಡಳಿಯ ಗಮನಕ್ಕೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಗರದಲ್ಲಿ ನಡೆದ ಮಂಡಳಿ ಸಭೆಯಲ್ಲಿ ಯುಪಿಸಿಎಲ್ ಅಧಿಕಾರಿಗಳ ಖುದ್ದು ವಿಚಾರಣೆ ನಡೆಸಲಾಗಿದ್ದು ಪ್ರತಿನಿತ್ಯ 150ರಿಂದ 200 ಟನ್ ಹಾರುಬೂದಿಯನ್ನು ಘಟಕದಿಂದ ಸುರಕ್ಷಿತವಾಗಿ ಹೊರ ಸಾಗಿಸಬೇಕು ಎಂದು ಸೂಚಿಸಲಾಗಿದೆ.

‘ಜೂನ್ ವೇಳೆಗೆ ಉಷ್ಣ ಸ್ಥಾವರದ ಬಳಿಯೇ ಸಿಮೆಂಟ್ ಗ್ರೈಂಡಿಂಗ್ ಘಟಕವೊಂದು ಅಸ್ತಿತ್ವಕ್ಕೆ ಬರಬೇಕಿತ್ತು.ಸ್ಥಳಾವಕಾಶದ ಕೊರತೆಯಿಂದಾಗಿ ಇದು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಇದರಿಂದಾಗಿ ಅಪಾರ ಹಣ ವ್ಯಯಿಸಿ ವಾಡಿ ಅಥವಾ ಚಿಕ್ಕಬಳ್ಳಾಪುರದ ಸಿಮೆಂಟ್ ಘಟಕಗಳಿಗೆ ಯುಪಿಸಿಎಲ್ ಹಾರು ಬೂದಿಯನ್ನು ಸಾಗಿಸುತ್ತಿದೆ’ ಎಂದು ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸ್ಥಾವರದಲ್ಲಿನ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಮಂಡಳಿ ತೀವ್ರ ನಿಗಾ ವಹಿಸಿದೆ. ಅಧಿಕಾರಿಗಳಿಂದ ಪ್ರತಿ ದಿನ ಮುಂಜಾಗ್ರತಾ ಕ್ರಮಗಳ ಕುರಿತು ವರದಿ ಪಡೆಯಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗಿದೆ. ತೆಂಕ ಎರ್ಮಾಳು ಬಳಿ ಒಡೆದು ಹೋದ ಪೈಪ್‌ಗಳನ್ನು ದುರಸ್ತಿ ಮಾಡಲು ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

800 ಕಿ.ಮೀ ದೂರದ ಗುಲ್ಬರ್ಗಾದ ವಾಡಿಗೆ ಹಾರುಬೂದಿ ಸಾಗಿಸುವ ಬದಲು ಸುಮಾರು 400 ಕಿ.ಮೀ ದೂರದ ಚಿಕ್ಕಬಳ್ಳಾಪುರದ ಸಿಮೆಂಟ್ ಕಾರ್ಖಾನೆಗೆ ಸಾಗಿಸಬಹುದೆಂದು ಯುಪಿಸಿಎಲ್‌ಗೆ ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.