ADVERTISEMENT

ಹಾಲಿನ ದರ ರೂ 2 ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:55 IST
Last Updated 14 ಫೆಬ್ರುವರಿ 2011, 18:55 IST
ಹಾಲಿನ  ದರ ರೂ 2 ಏರಿಕೆ
ಹಾಲಿನ ದರ ರೂ 2 ಏರಿಕೆ   

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ಸೋಮವಾರ ಒಪ್ಪಿಗೆ ನೀಡಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಈ ದರ ಹೆಚ್ಚಳ ಜಾರಿಯಾಗಲಿದೆ.

ಪ್ರತಿ ಲೀಟರ್ ಮೇಲೆ ಕನಿಷ್ಠ ಮೂರು ರೂಪಾಯಿ ಹೆಚ್ಚಳ ಮಾಡಲು ಅವಕಾಶ ಕೋರಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಪ್ರತಿ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಲು ಸರ್ಕಾರ ಕೆಎಂಎಫ್‌ಗೆ ಒಪ್ಪಿಗೆ ನೀಡಿದೆ. ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಸೋಮವಾರ ಬಳ್ಳಾರಿಯಲ್ಲಿ ಈ ವಿಷಯ ಪ್ರಕಟಿಸಿದರು.

ಹೆಚ್ಚಳವಾಗುವ ಎರಡು ರೂಪಾಯಿಯನ್ನು ಸಂಪೂರ್ಣವಾಗಿ ಹಾಲು ಉತ್ಪಾದಿಸುವ ರೈತರಿಗೆ ವರ್ಗಾವಣೆ ಮಾಡಲು ಕೆಎಂಎಫ್ ನಿರ್ಧರಿಸಿದೆ. ಮಂಗಳವಾರದಿಂದ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ 2 ಹೆಚ್ಚುವರಿ ದರ ನೀಡುವಂತೆ ಎಲ್ಲ ಹಾಲು ಒಕ್ಕೂಟಗಳಿಗೂ ಸೋಮಶೇಖರ ರೆಡ್ಡಿ ಸೋಮವಾರವೇ ನಿರ್ದೇಶನ ನೀಡಿದ್ದಾರೆ.

ಈವರೆಗೂ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ 16ರಿಂದ ರೂ 16.50ರವರೆಗೆ ನೀಡಲಾಗುತ್ತಿತ್ತು. 

ದರ ಹೆಚ್ಚಳದ ಪರಿಣಾಮವಾಗಿ ಮಂಗಳವಾರದಿಂದ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ ರೂ 18ರಿಂದ ರೂ 18.50ರವರೆಗೆ ದರ ಲಭ್ಯವಾಗಲಿದೆ.
ಒಂಬತ್ತು ತಿಂಗಳ ಬಳಿಕ ಏರಿಕೆ: ಈ ಹಿಂದೆ 2010ರ ಏಪ್ರಿಲ್ 8ರಂದು ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಮೇಲೆ ಮೂರು ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಒಂಬತ್ತು ತಿಂಗಳ ಬಳಿಕ ಮತ್ತೆ ರೂ 2 ಹೆಚ್ಚಳ ಮಾಡಲಾಗಿದೆ. ಸದ್ಯ ಈಗಾಗಲೇ ಮುದ್ರಿಸಿರುವ ಹಾಲಿನ ಪಾಕೆಟ್‌ಗಳ ‘ಫಿಲಂ’ ಖಾಲಿ ಆಗುವವರೆಗೂ ಪಾಕೆಟ್‌ಗಳ ಮೇಲೆ ಹಿಂದಿನ ದರವೇ ಇರುತ್ತದೆ. ಆದರೆ ಪರಿಷ್ಕೃತ ದರದಲ್ಲಿ ಮಾರಾಟ ನಡೆಯುತ್ತದೆ ಎಂದು ಕೆಎಂಎಫ್ ತಿಳಿಸಿದೆ.

‘ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಹೆಚ್ಚಳ ಮಾಡಲಾಗಿದೆ. ಮೇವು, ಪಶು ಆಹಾರ, ಹೈನುಗಾರಿಕೆಗೆ ಸಂಬಂಧಿಸಿದ ಯಂತ್ರೋಪಕರಣಗಳ ಬೆಲೆ ಏರಿಕೆಯಿಂದ ರೈತರು ತೊಂದರೆಗೆ ಸಿಲು ಕಿದ್ದರು. ಈ ಹಿನ್ನೆಲೆಯಲ್ಲಿ ರೈತರ ಮೇಲಿನ ಹೊರೆ ತಗ್ಗಿಸಲು ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿತ್ತು’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮ್‌ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಹೊರ ರಾಜ್ಯಗಳಲ್ಲಿ ಹಾಲಿನ ದರ ಪ್ರತಿ ಲೀಟರ್‌ಗೆ ರೂ 23ರಿಂದ ರೂ 34ರವರೆಗೆ ಇದೆ. ಅಲ್ಲಿ ರೈತರಿಗೂ ಹೆಚ್ಚಿನ ದರ ನೀಡಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿ ಹಾಲಿನ ಕೊರತೆ ಉದ್ಭವಿಸಿದ್ದು, ಅಲ್ಲಿನ ಹಾಲು ಒಕ್ಕೂಟಗಳು ಕರ್ನಾಟಕದ ಗಡಿ ಭಾಗದಲ್ಲಿ ಹಾಲು ಖರೀದಿಸಿ, ಕೊಂಡೊಯ್ಯುತ್ತಿವೆ. ರೈತರು ಹಾಲು ಮತ್ತು ಹಸುಗಳನ್ನೂ ಮಾರುತ್ತಿದ್ದಾರೆ. ಅದನ್ನು ತಡೆಯಲು ಬೆಲೆ ಹೆಚ್ಚಳ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಉತ್ಪಾದನೆ ಹೆಚ್ಚಿಸುವ ಉದ್ದೇಶ- (ಬಳ್ಳಾರಿ ವರದಿ): ಹಾಲಿನ ದರ ಏರಿಕೆಯನ್ನು ಬಳ್ಳಾರಿಯಲ್ಲಿ ಪ್ರಕಟಿಸಿದ ಸೋಮಶೇಖರ ರೆಡ್ಡಿ, ‘ಹಾಲು ಶೇಖರಣೆ ಹೆಚ್ಚಿಸಲು ಹಾಗೂ ಉತ್ಪಾದನಾ ವೆಚ್ಚ ಸರಿದೂಗಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದನ್ನು ಗಮನಿಸಿದ ಕೆಎಂಎಫ್ ಕಾರ್ಯನಿರೂಪಣಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು’ ಎಂದರು.

ರಾಜ್ಯದ ಸಹಕಾರಿ ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬೆಲೆ ಹಾಗೂ ಗುಣಮಟ್ಟದ ತಾಂತ್ರಿಕ ಸೌಲಭ್ಯ ಕಲ್ಪಿಸುವುದು ದರ ಹೆಚ್ಚಳದ ಉದ್ದೇಶವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT