ADVERTISEMENT

ಹಾಲಿನ ಬಾಕಿ 10 ದಿನದಲ್ಲಿ ಪಾವತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ಬೆಂಗಳೂರು: ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ 165 ಕೋಟಿ ರೂಪಾಯಿ ಬಾಕಿ ಹಣವನ್ನು ಹತ್ತು ದಿನಗಳಲ್ಲಿ ಪಾವತಿಸಲಾಗುವುದು ಎಂದು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ ಶುಕ್ರವಾರ ಪ್ರಕಟಿಸಿದರು.

ಕೆಎಂಎಫ್ ವಿವಿಧ ಬ್ಯಾಂಕುಗಳಿಂದ 120 ಕೋಟಿ ರೂಪಾಯಿ ಸಾಲ ಪಡೆದು ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲಿದೆ. ಒಕ್ಕೂಟಗಳು ರೈತರಿಗೆ ಬಾಕಿ ಇರುವ ಹಣ ಪಾವತಿಸಲಿವೆ. ಕೋಲಾರ ಮತ್ತು ಮೈಸೂರು ಹಾಲು ಒಕ್ಕೂಟಗಳು ಈಗಾಗಲೇ ಸ್ವತಂತ್ರವಾಗಿ ಸಾಲ ಪಡೆದು ರೈತರಿಗೆ ಹಣ ಪಾವತಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶೇ 10.5ರ ಬಡ್ಡಿ ದರದಲ್ಲಿ ಸಾಲ ಪಡೆಯಲಾಗುವುದು. ಈ ಪೈಕಿ ಶೇ 4ರಷ್ಟು ಬಡ್ಡಿಯನ್ನು ಕೆಎಂಎಫ್,  ಶೇ 6.5ರಷ್ಟು ಬಡ್ಡಿಯನ್ನು ಸರ್ಕಾರ ಭರಿಸಲಿವೆ. ಹೀಗಾಗಿ ಕೆಎಂಎಫ್‌ಗೆ ಹೊರೆಯಾಗುವುದಿಲ್ಲ. ಶನಿವಾರ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಸಾಲ ಪಡೆಯುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ಹಾಲು ಉತ್ಪಾದಕರಿಗೆ ಮೂರರಿಂದ ಆರು ವಾರಗಳ ಬಿಲ್ ಮೊತ್ತ ಬಾಕಿ ಇದೆ. 317 ಕೋಟಿ ರೂಪಾಯಿ ಮೊತ್ತದ ಹಾಲಿನ ಪುಡಿ ಮತ್ತು ಬೆಣ್ಣೆ ಮಾರಾಟವಾಗದೆ ಉಳಿದ ಕಾರಣ ಒಕ್ಕೂಟ ಸಂಕಷ್ಟದಲ್ಲಿದೆ. ಸರ್ಕಾರ ಒಕ್ಕೂಟದ ನೆರವಿಗೆ ಧಾವಿಸಿದ್ದು, ಮಾರ್ಚ್ ವೇಳೆಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರ ಸಬ್ಸಿಡಿ: ಒಂದು ಕಿಲೊ ಹಾಲಿನ ಪುಡಿ ತಯಾರಿಸಲು 180 ರೂಪಾಯಿ ವೆಚ್ಚವಾಗುತ್ತದೆ. ಆದರೆ, ಒಕ್ಕೂಟವು 140 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದರಿಂದ ಆಗುವ ನಷ್ಟದಲ್ಲಿ ಶೇ 50 ರಷ್ಟನ್ನು ಸರ್ಕಾರ ಭರಿಸಲಿದೆ. ಅದೇ ರೀತಿ ಪುಡಿ ಮಾರಾಟವಾಗದ ಸಂದರ್ಭದಲ್ಲಿ ಮರು ಸಂಸ್ಕರಣೆ ಮಾಡಲು ಒಂದು ಕಿಲೊಗೆ 25 ರೂಪಾಯಿಯಂತೆ ಸರ್ಕಾರವೇ ನೀಡಲಿದೆ ಎಂದರು.

ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ನಿತ್ಯ 52 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕೇಂದ್ರ ಸರ್ಕಾರ ಒಂದೂವರೆ ವರ್ಷದ ಹಿಂದೆ ಹಾಲಿನ ಪುಡಿ ರಫ್ತು ನಿಷೇಧಿಸಿದ್ದರಿಂದ ಹಾಗೂ ಉತ್ಪಾದನೆ ಹೆಚ್ಚಾಗಿದ್ದರಿಂದ ಹಾಲಿನ ಪುಡಿ ಮತ್ತು ಬೆಣ್ಣೆ ಸಂಗ್ರಹ ಜಾಸ್ತಿ ಇದೆ ಎಂದು ಹರ್ಷ ಗುಪ್ತ ವಿವರಿಸಿದರು.

17,572 ಟನ್ ಹಾಲಿನ ಪುಡಿ, 5,997 ಟನ್ ಬೆಣ್ಣೆ ಸಂಗ್ರಹವಿದೆ.

ಕಳೆದ ಮೂರು ತಿಂಗಳಲ್ಲಿ ಕಿಲೋಗೆ 140 ರೂಪಾಯಿ ದರದಲ್ಲಿ 1500 ಟನ್ ಹಾಲಿನ ಪುಡಿ ಮಾರಾಟ ಮಾಡಲಾಗಿದೆ. ಅದೇ ರೀತಿ ಕಳೆದ 15 ದಿನಗಳಲ್ಲಿ 170 ರೂಪಾಯಿ (ಪ್ರತಿ ಕಿಲೋಗೆ) ದರದಲ್ಲಿ 1,100 ಟನ್ ಬೆಣ್ಣೆ ಮಾರಾಟವಾಗಿದೆ ಎಂದರು.

ಕೆಎಂಎಫ್ ಉತ್ಪನ್ನಗಳನ್ನು ಹೊರ ರಾಜ್ಯಗಳಲ್ಲೂ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ದೆಹಲಿ, ಅಸ್ಸಾಂ, ಪಶ್ಚಿಮ ಬಂಗಾಳ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಚಾರ ಕಾರ್ಯ ಚುರುಕುಗೊಳಿಸುವ ಮೂಲಕ ಮಾರುಕಟ್ಟೆ ವಿಸ್ತರಿಸಲು ತೀರ್ಮಾನಿಸಲಾಗಿದೆ. `ಕೆಫೆ ಕಾಫಿ ಡೇ' ಮಳಿಗೆಗಳಲ್ಲಿ ಕೆಎಂಎಫ್ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

`ಗುಡ್‌ಲೈಫ್' ಹಾಲಿನ ಪ್ಯಾಕೆಟ್ ಹಾಗೂ ಪುಡಿಯನ್ನು ದುಬೈ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಆಫ್ರಿಕಾಕ್ಕೆ ರಫ್ತು ಮಾಡಲಾಗುವುದು. ಉತ್ಪನ್ನಗಳ ಮಾರಾಟವನ್ನು ಇನ್ನಷ್ಟು ವೃತ್ತಿಪರವಾಗಿಸುವ ಜೊತೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲಾಗುವುದು. ಮಾರುಕಟ್ಟೆ ವಿಭಾಗಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು.

ಲಿನ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಏಜೆಂಟರಿಗೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಹಾಗೂ ಇತರೆ ಒಕ್ಕೂಟಗಳಲ್ಲಿ ಒಂದು ರೂಪಾಯಿ ಪ್ರೊತ್ಸಾಹ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ಪಶು ಆಹಾರ ಖರೀದಿಯಲ್ಲಿ ನಡೆದಿರುವ ಅವ್ಯವಹಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಹಿಂದಿನ ವ್ಯವಸ್ಥಾಪಕ ನಿರ್ದೇಶಕರೇ ಇದಕ್ಕೆ ಹೊಣೆ. ಈ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದ್ದು, ಒಂದು ತಿಂಗಳಲ್ಲಿ ವರದಿ ಬರಲಿದೆ ಎಂದು ರೆಡ್ಡಿ ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT