ADVERTISEMENT

ಹಿಂಗಾರಿಗೂ ಬರಗಾಲದ ಭೀತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಬಳ್ಳಾರಿ:  ಅಕ್ಟೋಬರ್ ತಿಂಗಳು ಅರ್ಧ ಮುಗಿದಿದ್ದರೂ ಹದ ಮಳೆಯಾಗದ ಕಾರಣ ಸತತವಾಗಿ ಎರಡನೇ ವರ್ಷವೂ ಬರಗಾಲದ ಭೀತಿಯು ಜಿಲ್ಲೆಯ ಹಿಂಗಾರು ಹಂಗಾಮಿನ ಬೆಳೆ ಅವಲಂಬಿಸಿರುವ ರೈತರನ್ನು ಕಾಡುತ್ತಿದೆ.
ಅಕ್ಟೋಬರ್ ಆರಂಭಕ್ಕೆ ಬಿತ್ತನೆ ಪೂರ್ಣಗೊಳಿಸಿ, ಸಂತಸದಿಂದಲೇ ದಸರಾ, ದೀಪಾವಳಿ ಆಚರಣೆಯಲ್ಲಿ ತೊಡಗುತ್ತಿದ್ದ ರೈತರಲ್ಲಿ ಈ ಬಾರಿ ನಾಡಹಬ್ಬದ ಸಂಭ್ರಮ ಇಲ್ಲದಂತಾಗಿದೆ.

ಈ ವೇಳೆಗೆ ಬಿಳಿಜೋಳ, ಕಡಲೆ, ತೊಗರಿ, ಸೂರ್ಯಕಾಂತಿ ಮತ್ತಿತರ ಬೆಳೆಗಳ ಬಿತ್ತನೆ ಪೂರ್ಣಗೊಳಿಸುತ್ತಿದ್ದ ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಹಿಂಗಾರು ಮಳೆಯಾಶ್ರಿತ ರೈತರು ಈ ಬಾರಿ ಭೂಮಿ ಸಿದ್ಧಪಡಿಸಿಕೊಂಡು ಮಳೆಗಾಗಿ ಕಾದು ಕುಳಿತಿದ್ದಾರೆ.

ಸೆಪ್ಟೆಂಬರ್ ಕೊನೆ ವಾರದಲ್ಲಿ ಬಿದ್ದ ಮಳೆ ನೆಚ್ಚಿಕೊಂಡು ಕೆಲವೆಡೆ ಬಿತ್ತನೆ ಮಾಡಿರುವ ರೈತರು ಈಗ ತೇವಾಂಶವಿಲ್ಲದೆ ಬೆಳೆ ಒಳಗುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ.

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ 1.65 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಕೇವಲ ಶೇ 25ರಿಂದ 30ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಹಾಬಲೇಶ್ವರಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಹತ್ತಿ, ಮೆಣಸಿನಕಾಯಿ ಮತ್ತಿತರ ಬೆಳೆ ಬೆಳೆದಿರುವ  ರೈತರಿಗೂ ಉತ್ತಮ ಇಳುವರಿಗೆ ಹಾಗೂ ಕೀಟ ಬಾಧೆ ನಿವಾರಣೆಗೆ ಈಗ ಮಳೆಯ ಅಗತ್ಯವಿತ್ತು. ಆ ರೈತರೂ ತೊಂದರೆಗೆ ಸಿಲುಕಿದ್ದಾರೆ ಎಂದು  ಹೇಳಿದರು.

`ಮಳೆ ಸಮರ್ಪಕವಾಗಿದ್ದಿದ್ದರೆ ಈ ವೇಳೆಗೆ ಹಸಿರಿನಿಂದ ಕಂಗೊಳ್ಳಿಸುತ್ತಿದ್ದ ಹೊಲದಲ್ಲಿ ಕೂಲಿ ಕಾರ್ಮಿಕರು ಕಳೆ ಕೀಳುವ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು. ಈಗ ಅವರಿಗೂ ಕೆಲಸವಿಲ್ಲದಂತಾಗಿದೆ. ತೀವ್ರ ಬರಗಾಲದಿಂದಾಗಿ ಕಳೆದ ವರ್ಷವೂ ಬೆಳೆ ಕೈಗೆ ಸಿಗಲಿಲ್ಲ. ಈ ಬಾರಿಯಾದರೂ ವರುಣ ಕೈಹಿಡಿಯಬಹುದು ಎಂಬ ಭರವಸೆ ನಿಧಾನವಾಗಿ ಕಮರುತ್ತಿದೆ~ ಎನ್ನುತ್ತಾರೆ ತಾಲ್ಲೂಕಿನ ಅಮರಾಪುರ ಗ್ರಾಮದ ರೈತ ಅಮರಗೌಡ.

`ಸೆಪ್ಟೆಂಬರ್‌ನಲ್ಲಿ ಬಿದ್ದ ಮಳೆ ಆಧರಿಸಿ ಎಳ್ಳು, ಸೂರ್ಯಕಾಂತಿ, ತೊಗರಿ ಬೆಳೆಗಳು ಮಳೆಯ ಕೊರತೆಯಿಂದ ಒಣಗುತ್ತಿವೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಈ ಬಾರಿಯೂ ಸಂಕಷ್ಟ ನಷ್ಟ ಎದುರಿಸಬೇಕಾಗುತ್ತದೆ~ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.