ADVERTISEMENT

ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 17:20 IST
Last Updated 14 ಮಾರ್ಚ್ 2011, 17:20 IST

ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಮಸೂದೆಗೆ ತರಲಾಗಿರುವ ತಿದ್ದುಪಡಿಯನ್ನು ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆಯೇ ಸೋಮವಾರ ಅಂಗೀಕರಿಸಲಾಯಿತು.

ತಿದ್ದುಪಡಿ ಮಸೂದೆ ಅಂಗೀಕಾರವಾಗುವುದಕ್ಕೂ ಮುನ್ನ ಸದನದಲ್ಲಿ ಮಾತನಾಡಿದ ಮುಜರಾಯಿ ಸಚಿವ ಡಾ.ವಿ.ಎಸ್. ಆಚಾರ್ಯ ಅವರು, ‘ರಾಜ್ಯದ ಅಡ್ವೊಕೇಟ್ ಜನರಲ್ ಅವರ ಜೊತೆ ಈ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಸಲಾಗಿದೆ, ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಮುಚ್ಚಳಿಕೆ ಬರೆದುಕೊಡಬೇಕು ಎಂಬ ತೀರ್ಮಾನ ಆಗಿದೆ’ ಎಂದು ತಿಳಿಸಿದರು.

ಮಾ.8ರಂದು ಈ ತಿದ್ದುಪಡಿ ಮಸೂದೆಯನ್ನು ಪರಿಷತ್ತಿನಲ್ಲಿ ಮಂಡಿಸಿದ್ದಾಗ, ಇದರಲ್ಲಿನ ಅಂಶಗಳು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬರೆದುಕೊಟ್ಟ ಮುಚ್ಚಳಿಕೆಗೆ ಅನುಗುಣವಾಗಿಲ್ಲ ಎಂದು ವಿರೋಧ ಪಕ್ಷಗಳು ಆಕ್ಷೇಪ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.ಸೋಮವಾರ ಪರಿಷತ್ತಿನಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕಿ ಮೋಟಮ್ಮ, ‘ಮಠಗಳು ಮತ್ತು ಅವುಗಳಿಗೆ ಸೇರಿದ ದೇವಸ್ಥಾನಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರಬೇಕು.ಹಾಗಾಗಿ ಸುಪ್ರೀಂ ಕೋರ್ಟ್‌ಗೆ ಹಿಂದೆ ಬರೆದುಕೊಟ್ಟ ರೀತಿಯಲ್ಲಿಯೇ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ವಿ.ಆರ್. ಸುದರ್ಶನ್ ಮಾತನಾಡಿ, ‘ಮಠಗಳು ಮತ್ತು ಮಠಗಳಿಗೆ ಸೇರಿದ ದೇವಸ್ಥಾನಗಳು ಈ ತಿದ್ದುಪಡಿ ಮಸೂದೆಯ ವ್ಯಾಪ್ತಿಗೆ ಬರುವುದಿಲ್ಲ, ರಾಜ್ಯದ ಒಟ್ಟು 30 ಇಂಥ ಸಂಸ್ಥೆಗಳು ತಮ್ಮನ್ನು ಅಧಿಸೂಚನೆಯಿಂದ ಹೊರಗಿಡಬೇಕು ಎಂದು ಮನವಿ ಸಲ್ಲಿಸಿದೆ. ಆದರೆ ಸರ್ಕಾರ ಕೇವಲ ಉಡುಪಿಯ ಶ್ರೀಕೃಷ್ಣ ಮಠವನ್ನು ಮಾತ್ರ ಅಧಿಸೂಚನೆಯಿಂದ ಹೊರಗಿಟ್ಟಿದೆ. ಇದು ತಾರತಮ್ಯ’ ಎಂದರು. ವಿರೋಧ ಪಕ್ಷದ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಆಚಾರ್ಯ ಅವರು, ‘ಮಠಗಳು ಮತ್ತು ಅವುಗಳಿಗೆ ಸಂಬಂಧಿಸಿದ ದೇವಸ್ಥಾನಗಳಲ್ಲಿ ಯಾವುದೇ ವ್ಯಾಜ್ಯಗಳು ಬಂದಲ್ಲಿ ಅವುಗಳ ನಿರ್ವಹಣೆಗೆ ಸಿವಿಲ್ ಕಾನೂನಿನಲ್ಲಿ ಅವಕಾಶ ಇದೆ. ಉಡುಪಿ ಶ್ರೀಕೃಷ್ಣ ಮಠವನ್ನು ಅಧಿಸೂಚನೆಯಿಂದ ಕೈಬಿಟ್ಟಂತೆಯೇ ಉಳಿದ 29 ಧಾರ್ಮಿಕ ಕೇಂದ್ರಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು’ ಎಂದರು.

ತಿದ್ದುಪಡಿ ಮಸೂದೆಯನ್ನು ಮಂಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್‌ನ ಎಂ.ಸಿ. ನಾಣಯ್ಯ, ‘ಮೊದಲು ಸುಪ್ರೀಂ ಕೋರ್ಟ್‌ಗೆ ಹೋಗಿ, ಈ ರೀತಿಯ ತಿದ್ದುಪಡಿ ತರುತ್ತಿದ್ದೇವೆ ಎಂದು ಅಲ್ಲಿ ಒಪ್ಪಿಗೆ ಪಡೆದು ಆಮೇಲೆ ಇಲ್ಲಿ ಮಂಡಿಸಿ. ಆದರೆ ಇಲ್ಲಿ ಮಂಡಿಸಿ ಆಮೇಲೆ ಸುಪ್ರೀಂ ಕೋರ್ಟ್‌ಗೆ ತಿದ್ದುಪಡಿ ಮಸೂದೆ ತೆಗೆದುಕೊಂಡು ಹೋಗುವುದನ್ನು ನಾವು ವಿರೋಧಿಸುತ್ತೇವೆ’ ಎಂದರು. ಆಚಾರ್ಯ ಅವರು ತಿದ್ದುಪಡಿ ಮಸೂದೆ ಮಂಡಿಸಿದಾಗ ಅದನ್ನು ವಿರೋಧಿಸಿದ ಜೆಡಿಎಸ್ ಸದಸ್ಯರು ನಾಣಯ್ಯ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು.

ಸರ್ಕಾರದ ಹುನ್ನಾರ ಆರೋಪ

ಮಸೂದೆ ಅಂಗೀಕಾರಕ್ಕೆ ಮುನ್ನನಡೆದ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್‌ನ ವೈ.ಎಸ್.ವಿ. ದತ್ತ, ‘ಈ ಮಸೂದೆಯನ್ನು ಇಷ್ಟು ತರಾತುರಿಯಲ್ಲಿ ತರುತ್ತಿರುವುದರ ಹಿಂದೆ ಸರ್ಕಾರದ ಹುನ್ನಾರ ಇದೆ’ ಎಂದು ಆರೋಪಿಸಿದರು.ಉಡುಪಿಯ ಪೇಜಾವರ ಶ್ರೀಗಳು ಮುಜರಾಯಿ ಸಚಿವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸದನದಲ್ಲಿ ಓದಿದರು. ‘2010ರ ಆಗಸ್ಟ್ 20ರ ಪತ್ರದಲ್ಲಿ ಶ್ರೀಗಳು ಕೃಷ್ಣ ಮಠವನ್ನು ಅಧಿಸೂಚನೆಯಿಂದ ಕೈಬಿಡಲು ಇದು ಸಕಾಲ ಎಂದಿದ್ದಾರೆ’ ಎಂದರು.

ಇದಕ್ಕೆ ಉತ್ತರಿಸಿದ ಆಚಾರ್ಯ, ‘ಸರ್ಕಾರಿ ಅಧಿಕಾರಿಯೊಬ್ಬರು ಮಾಡಿದ ತಪ್ಪಿನಿಂದಾಗಿ ಕೃಷ್ಣ ಮಠ ಅಧಿಸೂಚನೆಗೆ ಒಳಪಟ್ಟಿತು.ಒಂದು ನಿಮಿಷ ಕೂಡ ಕೃಷ್ಣ ಮಠ ಸರ್ಕಾರದ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಅದು ಮಧ್ವಾಚಾರ್ಯರ ಕಾಲದಿಂದಲೂ ಉಡುಪಿಯ ಅಷ್ಟ ಮಠಗಳ ಸುಪರ್ದಿಗೆ ಒಳಪಟ್ಟಿದೆ’ ಎಂದರು.

ಶ್ರೀಕಂಠಯ್ಯಗೆ ಶ್ರದ್ಧಾಂಜಲಿ
ಬೆಂಗಳೂರು:  ಹಿರಿಯ ರಾಜಕಾರಣಿ, ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ಹಾಗೂ ಜಪಾನಿನಲ್ಲಿ ಸಂಭವಿಸಿದ ಸುನಾಮಿ- ಭೂಕಂಪಕ್ಕೆ ಮಡಿದ ಸಾವಿರಾರು ಜನರಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸೋಮವಾರ ಸಂತಾಪ ಸಲ್ಲಿಸಲಾಯಿತು.

ವಿಧಾನ ಪರಿಷತ್‌ನಲ್ಲಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮತ್ತು ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸಂತಾಪಸೂಚಕ ನಿರ್ಣಯ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.