ADVERTISEMENT

ಹಿರಿಯ ಅಭ್ಯರ್ಥಿ ಕಾಗೋಡು ತಿಮ್ಮಪ್ಪಗೆ ಸೋಲು

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ   

ಶಿವಮೊಗ್ಗ: ಸಮಾಜವಾದಿ ಹಿನ್ನೆಲೆಯ ಕಾಗೋಡು ತಿಮ್ಮಪ್ಪ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತ್ಯಂತ ಹಿರಿಯ (87) ಅಭ್ಯರ್ಥಿ. ಅವರು ಬಿಜೆಪಿಯ ಹರತಾಳು ಹಾಲಪ್ಪ ಅವರ ಎದುರು ಸೋಲು ಕಂಡಿದ್ದಾರೆ.

1967ರಲ್ಲಿ ತಿಮ್ಮಪ್ಪ ಮೊದಲ ಬಾರಿ ಚುನಾವಣೆ ಎದುರಿಸಿದ್ದರು. 1972ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 11 ಬಾರಿ ಚುನಾವಣೆ ಎದುರಿಸಿರುವ ಅವರು 5 ಬಾರಿ ಗೆಲುವು ಕಂಡಿದ್ದರು. ಕಳೆದ ಬಾರಿ ‘ಇದೇ ನನ್ನ ಕೊನೆಯ ಚುನಾವಣೆ’ ಎಂದು ಘೋಷಿಸಿದ್ದ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತ್ತೆ ಕಣಕ್ಕೆ ಇಳಿದಿದ್ದರು.

ಕಳೆದ ಬಾರಿ ಸೊರಬದಲ್ಲಿ ಸೋಲು ಕಂಡಿದ್ದ ಹರತಾಳು ಹಾಲಪ್ಪ ಈ ಬಾರಿ ಕಾಗೋಡು ವಿರುದ್ಧ ಸಾಗರದಲ್ಲಿ ಸ್ಪರ್ಧಿಸಿದ್ದರು. ಕೊನೆಯ ಕ್ಷಣದಲ್ಲಿ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರಿದ ಕಾರಣ ಕಾಗೋಡು ಗೆಲುವು ಸುಲಭವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಎಲ್ಲ ನಿರೀಕ್ಷೆಗಳನ್ನೂ ತಲೆಕೆಳಗೆ ಮಾಡಿ ಹರತಾಳು ವಿಜಯಮಾಲೆ ಧರಿಸಿದ್ದಾರೆ.

ADVERTISEMENT

ತಮ್ಮನ ಮಣಿಸಿದ ಅಣ್ಣ:
ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರು ಸಹೋದರ ಜೆಡಿಎಸ್‌ನ ಮಧು ಬಂಗಾರಪ್ಪ ಅವರನ್ನು ಮಣಿಸಿದ್ದಾರೆ. 2004ರಿಂದ ಈ ಕ್ಷೇತ್ರ ಸಹೋದರರ ಸವಾಲಿಗೆ ವೇದಿಕೆಯಾಗಿತ್ತು. ಅಂದು ಎಸ್‌. ಬಂಗಾರಪ್ಪ ಬಿಜೆಪಿ ಸೇರಿದ್ದರು. ಅದಕ್ಕೆ ಒಪ್ಪದ ಕುಮಾರ್, ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದರು. ಮಧು ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2008ರಲ್ಲಿ ಇಬ್ಬರೂ ಸಹೋದರರನ್ನು ಸೋಲಿಸಿ ಹರತಾಳು ಹಾಲಪ್ಪ ಗೆಲುವು ದಾಖಲಿಸಿದ್ದರು. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಎರಡು ಸೋಲುಗಳಿಗೆ ಸೇಡು ತೀರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.