ADVERTISEMENT

ಹಿರಿಯ ನಟಿ ಉಮಾ ಶಿವಕುಮಾರ್ ನಿಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 19:59 IST
Last Updated 25 ಜೂನ್ 2013, 19:59 IST

ಬೆಂಗಳೂರು: `ಬಡ್ಡಿ ಬಂಗಾರಮ್ಮ' ಎಂದೇ ಜನಪ್ರಿಯರಾಗಿದ್ದ ಹಿರಿಯ ನಟಿ ಉಮಾ ಶಿವಕುಮಾರ್ (71) ಮಂಗಳವಾರ ಬೆಳಗಿನ ಜಾವ ನಿಧನರಾದರು.

ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಅವರು, ಕೆಲಕಾಲದಿಂದ ಶ್ವಾಸಕೋಶ ಸಮಸ್ಯೆ ಮತ್ತು ಮಧುಮೇಹದಿಂದ ಬಳಲುತ್ತಿದ್ದರು.

1972ರಲ್ಲಿ `ವಂಶವೃಕ್ಷ' ಚಿತ್ರದ ಮೂಲಕ ಪೋಷಕ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಉಮಾ ಶಿವಕುಮಾರ್, `ಚಂದನದ ಗೊಂಬೆ', `ಮದುವೆ ಮಾಡಿನೋಡು', `ಕಾಡು', `ಭಾಗ್ಯದ ಲಕ್ಷ್ಮೀ ಬಾರಮ್ಮ', `ಮಕ್ಕಳಿರಲವ್ವ ಮನೆತುಂಬ', `ಸತಿ ಸಕ್ಕುಬಾಯಿ', `ಭಕ್ತ ಸಿರಿಯಾಳ', `ಗಾಳಿಮಾತು', `ಮನೆಯೇ ಮಂತ್ರಾಲಯ', `ನೀ ಬರೆದ ಕಾದಂಬರಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. `ಚಂದನದ ಗೊಂಬೆ' ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಅವರಿಗೆ ಲಭಿಸಿತ್ತು.

`ಬಡ್ಡಿ ಬಂಗಾರಮ್ಮ' ಅವರಿಗೆ ಜನಪ್ರಿಯತೆ ತಂದುಕೊಟ್ಟ ಚಿತ್ರ. ಚಿತ್ರರಂಗ ಪ್ರವೇಶಿಸುವ ಮುನ್ನ ಅವರು ನಟರಂಗ ಮತ್ತಿತರ ರಂಗಭೂಮಿ ತಂಡಗಳಲ್ಲಿ ತೊಡಗಿಸಿಕೊಂಡಿದ್ದರು. ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ `ಬ್ಯೂಟಿ ಪಾರ್ಲರ್ ಕಾಲೇಜ್' ಅನ್ನೂ ಅವರು ಸ್ಥಾಪಿಸಿದ್ದರು. ಅವರಿಗೆ ಪತಿ ಶಿವಕುಮಾರ್, ಮಗ ಮತ್ತು ಮಗಳು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.