ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ: ‘ಸಿಇಸಿ’ ಚರ್ಚೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಬೆಂಗಳೂರು: ಹುಬ್ಬಳ್ಳಿ – ಅಂಕೋಲಾ ಮಾರ್ಗದ ರೈಲ್ವೆ ಯೋಜನೆಗೆ ಸಂಬಂಧಿ­ಸಿ­ದಂತೆ ಕೇಂದ್ರ ಉನ್ನತಾ­ಧಿಕಾರ ಸಮಿತಿಯ (ಸಿಇಸಿ)ತಂಡ ಮಂಗಳವಾರ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿತು.

ಒಟ್ಟು 168 ಕಿ.ಮೀ. ಮಾರ್ಗದ ಪೈಕಿ 112 ಕಿ.ಮೀ. ಅರಣ್ಯದಲ್ಲಿ ಬರುತ್ತದೆ. ಅರಣ್ಯ ಪ್ರದೇಶದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ಮೂಲಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಪಿ.ವಿ. ಜಯಕೃಷ್ಣನ್‌ ನೇತೃತ್ವದ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ವಿವಿಧ ರೀತಿಯ ವಾಹನಗಳ ಸಂಚಾರದಿಂದ ಅರಣ್ಯದಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ. ರೈಲ್ವೆ ಯೋಜನೆ ಜಾರಿಯಾದರೆ ಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾಗಿ ಮುಖರ್ಜಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬುಧವಾರ ಮತ್ತು ಗುರುವಾರ ತಂಡವು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ಅಧ್ಯಯನ ಮಾಡಲಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ತಂಡದೊಂದಿಗೆ ತೆರಳಿದ್ದಾರೆ ಎಂದರು.  ಹುಬ್ಬಳ್ಳಿ – ಅಂಕೋಲಾ ನಡುವೆ ರೈಲ್ವೆ ಯೋಜನೆ ಅನುಷ್ಠಾನಗೊಳಿಸುವ ಅಗತ್ಯವಿದೆ. ಸುಮಾರು 700 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗುವ ಸಾಧ್ಯತೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.