ADVERTISEMENT

ಹುಬ್ಬಳ್ಳಿ: 11ರಂದು ಬಿಎಸ್‌ವೈ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನಾ ಸಮಾರಂಭ ಇದೇ 11ರಂದು ಮಧ್ಯಾಹ್ನ 3 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಈ ಸಂಬಂಧ ನಗರದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ನಂತರ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಮೂರೂವರೆ ವರ್ಷಗಳ ಅವಧಿಯಲ್ಲಿ ಯಡಿಯೂರಪ್ಪ ಅವರು ಮಾಡಿರುವ ಸಾಧನೆಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.

`ಬೆಂಗಳೂರಿನಲ್ಲಿ ನಡೆದ ಯಡಿಯೂರಪ್ಪ ಅವರ 70ನೇ ಜನ್ಮದಿನದ ಸಮಾರಂಭದಲ್ಲಿ ಉತ್ತರ ಕರ್ನಾಟಕದ ಎಲ್ಲ ಕಾರ್ಯಕರ್ತರಿಗೆ ಭಾಗವಹಿಸಲು ಆಗಿರಲಿಲ್ಲ. ಇದಕ್ಕಾಗಿ ಈ ಭಾಗದ ಎಲ್ಲ ಜಿಲ್ಲೆಗಳಿಂದ ಸುಮಾರು 2 ಲಕ್ಷ ಕಾರ್ಯಕರ್ತರು 11ರಂದು ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರನ್ನು ಆಹ್ವಾನಿಸಲಾಗಿದೆ~ ಎಂದು ಅವರು ಹೇಳಿದರು.

`ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿಲ್ಲ~
ಹುಬ್ಬಳ್ಳಿ:
`ವಿಧಾನಸಭೆಯಲ್ಲಿ ಮೂವರು ಸಚಿವರು ಅಶ್ಲೀಲ ಚಿತ್ರವನ್ನು ವೀಕ್ಷಿಸಿಲ್ಲ. ಸದನದ ಸಿಸಿ ಟಿವಿ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದನ್ನು ವೀಕ್ಷಿಸಲಾಗಿ, ಅವರು ಮೊಬೈಲ್ ಆಪರೇಟ್ ಮಾಡಿದ್ದಾರೆ ಅಷ್ಟೆ~ ಎಂದು ಪ್ರಕರಣದ ತನಿಖೆಗಾಗಿ ನೇಮಿಸಲಾಗಿರುವ ಸದನ ಸಮಿತಿ ಅಧ್ಯಕ್ಷ ಶ್ರೀಶೈಲಪ್ಪ ಬಿದರೂರ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸುವ ಸಮಾರಂಭಕ್ಕೆ ಸಂಬಂಧಿಸಿ ನಗರದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

`ವಿಧಾನಸಭೆಯಲ್ಲಿ ಅನೇಕ ಸಚಿವರು ಹಾಗೂ ಶಾಸಕರು ಮೊಬೈಲ್ ಆಪರೇಟ್ ಮಾಡುತ್ತಾರೆ. ಆದರೆ ಆ ಮೊಬೈಲಿನಲ್ಲಿ ಏನಿದೆ, ಯಾವ ಚಿತ್ರವಿದೆ ಎಂದು ಗಮನಿಸುವುದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿರುವುದರಿಂದ ಹೆಚ್ಚು ಹೇಳಲಾರೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.