ADVERTISEMENT

ಹುಮನಾಬಾದ್: ನಾಲ್ಕು ಮಕ್ಕಳ ಜಲಸಮಾಧಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ಹುಮನಾಬಾದ್‌: ಪಟ್ಟಣದ ಹೊರವಲಯದ ಕಲ್ಲೂರ ರಸ್ತೆಯ ಬುಗ್ಗಿ ಬಸವಣ್ಣ ಕೆರೆಯಲ್ಲಿ ಶನಿವಾರ ಬೆಳಿಗ್ಗೆ  ಮೂವರು ಬಾಲಕಿಯರು ಮತ್ತು ಒಬ್ಬ ಬಾಲಕ ಜಲಸಮಾಧಿಯಾಗಿದ್ದಾರೆ. ಯುವರಾಜ್‌ ಬಾದಲ್‌ (7), ರೂಪಾ ಗುಡಪ್ಪ (9), ಲತಾ ವಸಂತ (9) ಮತ್ತು ಪೂಜಾ ಗಣಪತ್‌(10) ಮೃತಪಟ್ಟವರು.|

ಹುಮನಾಬಾದಿನ ವಾಂಜ್ರಿ ಪ್ರದೇಶದ ಐ.ಡಿ.ಎಸ್‌.ಎಂ.ಟಿ ಉದ್ಯಾನ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡು ಈ ಮಕ್ಕಳ ಪಾಲಕರು ವಾಸಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಬೆಳಿಗ್ಗೆ ಎಂದಿನಂತೆ ಕಟ್ಟಿಗೆ ಆಯಲು ಈ ಮಕ್ಕಳು ಒಟ್ಟಾಗಿ ಹೋಗಿದ್ದರು.

ಯುವರಾಜ ಬಾದಲ್   ಈಜಾಡಲು ಕೆರೆಗೆ ಇಳಿದಿದ್ದಾನೆ. ಆತ ಮರಳಿ ಬಾರದಿದ್ದಾಗ ಗಾಬರಿಗೊಂಡು ಆತನ ರಕ್ಷಣೆಗೆ ಧಾವಿಸಿದ ರೂಪಾ, ಲತಾ ಹಾಗೂ ಪೂಜಾ ಕೂಡಾ ನೀರು ಪಾಲಾದರು. ಈ ನಾಲ್ವರೂ ಮುಳುಗಿರುವ ವಿಷಯವನ್ನು ಇವರೊಂದಿಗೆ ಹೋಗಿದ್ದ ಇನ್ನುಳಿದ ಮಕ್ಕಳು ಪಾಲಕರ ಗಮನಕ್ಕೆ ತಂದರು.

‘ನುರಿತ ಈಜುಗಾರರ ನೆರವಿನಿಂದ ಮಕ್ಕಳ ಶವಗಳನ್ನು ಹೊರತೆಗೆಯಲಾಯಿತು’ ಎಂದು ಅಗ್ನಿ ಶಾಮಕ  ಠಾಣಾಧಿಕಾರಿ ಪ್ರಭಾಕರ ಕುಲಕರ್ಣಿ,  ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಅನಿಲಕುಮಾರ ತಿಳಿಸಿದರು. ಪರಿಹಾರದ ಭರವಸೆ: ಪ್ರಾಣ ಕಳೆದುಕೊಂಡ ಮಕ್ಕಳ ಪಾಲಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ರೂ 1 ಲಕ್ಷ ಪರಿಹಾರ ಕೊಡಿಸಲಾಗುವುದು  ಎಂದು ಸಂಸದ ಎನ್‌.ಧರ್ಮಸಿಂಗ್‌, ಶಾಸಕ ರಾಜಶೇಖರ ಬಿ.ಪಾಟೀಲ ಭರವಸೆ ನೀಡಿದ್ದಾರೆ. ಶಾಸಕ ನೆರವು: ಮೃತ ಮಕ್ಕಳ ಅಂತ್ಯಕ್ರಿಯೆಗಾಗಿ ಶಾಸಕ ಪಾಟೀಲರು ವೈಯಕ್ತಿಕವಾಗಿ ತಲಾ ರೂ 5 ಸಾವಿರ ನೀಡಿದ್ದಾರೆ.

ರೋದನ: ಸ್ಥಳದಲ್ಲಿ ಸೇರಿದ್ದ ಮೃತ ಮಕ್ಕಳ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಮೂರನೇ ದುರಂತ: ಈ ಕೆರೆಯಲ್ಲಿ ಇಂಥ ದುರಂತ ಸಂಭವಿಸಿರುವುದು ಇದು ಮೂರನೇ ಬಾರಿ. ಮೂರು ವರ್ಷಗಳ ಹಿಂದೆ ಮೂರು ಮಕ್ಕಳು, ಒಂದು ವರ್ಷದ ಹಿಂದೆ ಇಬ್ಬರು ಮಕ್ಕಳು ಇದೇ ಕೆರೆಯಲ್ಲಿ ಈಜಾಡಲು ಹೋಗಿ ಮೃತಪಟ್ಟದ್ದರು. ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌, ಎಸ್ಪಿ ತ್ಯಾಗರಾಜನ್‌ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.