ADVERTISEMENT

ಹುಲಿ ಬಂತು ಹುಲಿ...

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 3:14 IST
Last Updated 29 ಮಾರ್ಚ್ 2018, 3:14 IST
ಹುಲಿ ಬಂತು ಹುಲಿ...
ಹುಲಿ ಬಂತು ಹುಲಿ...   

ಮಧುಗಿರಿ: ತಾಲ್ಲೂಕಿನ ಹಿಂದೂಪುರ ರಸ್ತೆಯಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ‘ಹುಲಿ ರಸ್ತೆ ದಾಟುತ್ತಿದೆ..’ ಎಂದು ಚಿತ್ರಸಹಿತ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪ್ರಕಟಿಸಿದ್ದು, ಈ ಭಾಗದಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿತ್ತು.

ಅರಣ್ಯ ಇಲಾಖೆ, ಸಿಬ್ಬಂದಿ ಗುರುವಾರ ನಸುಕಿನಲ್ಲೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಸುತ್ತಮುತ್ತಲೂ ಎಲ್ಲೂ ಹುಲಿಯ ಹೆಜ್ಜೆ ಗುರುತುಗಳು ಕಾಣಲಿಲ್ಲ.

ಕುತೂಹಲದಿಂದ ಜನರು ಸಹ ಹುಲಿಯ ಹೆಜ್ಜೆ ಗುರುತಿಗಾಗಿ ಹುಡುಕಿದರು. ಬಾಯಿಂದ ಬಾಯಿಗೆ ಸುದ್ದಿ ಹರಡಿ ಜನರ ಚರ್ಚೆಗೆ ಗ್ರಾಸವಾಯಿತು.

ADVERTISEMENT

ಚಿತ್ರದಲ್ಲಿ ಕಾಣುತ್ತಿರುವ, ಹೆದ್ದಾರಿ, ಸ್ಥಳದ ಚಿತ್ರಣ ತಾಲ್ಲೂಕಿನದು ಇರುವಂತೆ ಕಾಣುತ್ತಿಲ್ಲ. ಇದು ಸುಳ್ಳು ಸುದ್ದಿ. ಬೇರೆ ಎಲ್ಲಿಯದೋ ಸ್ಥಳದ ಚಿತ್ರ ಇರಬೇಕು. ಯಾರೋ ಬೇಕಂತಲೇ ಮಧುಗಿರಿ- ಹಿಂದೂಪುರದ ಹೆದ್ದಾರಿ ಎಂದು ನಮೂದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ. ನಮ್ಮ ಭಾಗದಲ್ಲಿ ಹುಲಿಗಳು ಇಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಜಾವಾಣಿಗೆ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

ಚಿರತೆಗಳು ಈ ಭಾಗದಲ್ಲಿ ಸಾಕಷ್ಟು ಇವೆ. ಹುಲಿ ನಮಗೆ ಎಂದೂ ಕಾಣಿಸಿಲ್ಲ. ಆದರೂ ಚಿತ್ರ ನೋಡಿದ ನಂತರ ಭಯವಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಮಲ್ಲೇನಹಳ್ಳಿಯ ಸಮೀಪವಿರುವ ರಸ್ತೆ, ತೋಟ ಹಾಗೂ ನೀರು ಇರುವ ಹೊಂಡಗಳ ಸಮೀಪದಲ್ಲಿ ಹುಲಿಯ ಹೆಜ್ಜೆಗಳ ಗುರುತುಗಳು ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.