ADVERTISEMENT

ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 19:30 IST
Last Updated 18 ನವೆಂಬರ್ 2012, 19:30 IST
ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು
ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು   

ದಾವಣಗೆರೆ: ಬಾಲಕಿಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ `ಪ್ರಾಥಮಿಕ ಹಂತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ~ (ಎನ್‌ಪಿಇಜಿಇಎಲ್) ಅನುಷ್ಠಾನಕ್ಕೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ರೂ 7.35 ಕೋಟಿ ಅನುದಾನ ದೊರೆತಿದೆ. ರಾಜ್ಯದ 1,451 ಮಾದರಿ ಕ್ಲಸ್ಟರ್ ಶಾಲೆಗಳನ್ನು ಕಾರ್ಯಕ್ರಮ ಅನುಷ್ಠಾನಕ್ಕೆ ಆಯ್ಕೆ ಮಾಡಲಾಗಿದೆ.

ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು, ಹೆಚ್ಚುವರಿ ಸವಲತ್ತು ಒದಗಿಸಲು ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಪ್ರಾಥಮಿಕ ಶಾಲಾ ಹಂತದ ದಾಖಲಾತಿ ಹಾಗೂ ಹಾಜರಾತಿಯಲ್ಲಿ ಲಿಂಗ ಅಸಮಾನತೆ ಕಂಡುಬಂದಿದೆ. ಪರಿಶಿಷ್ಟ ಜಾತಿ, ಪಂಗಡದ ಹೆಣ್ಣು ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚು. ಹೀಗಾಗಿ, ಹೆಣ್ಣು ಮಕ್ಕಳ ಅವಶ್ಯಕತೆಗೆ ಅನುಗುಣವಾಗಿ ಕೆಲವು ಚಟುವಟಿಕೆಗಳನ್ನು ಸೇರಿಸಿ ಕಾರ್ಯಕ್ರಮ ರೂಪಿಸಲಾಗಿದೆ.

ಬಾಗಲಕೋಟೆ, ಬೀದರ್, ಬಳ್ಳಾರಿ, ಕೊಪ್ಪಳ, ಗುಲ್ಬರ್ಗ, ರಾಯಚೂರು, ವಿಜಾಪುರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಕೋಲಾರ, ಮೈಸೂರು, ರಾಮನಗರ, ತುಮಕೂರು, ಯಾದಗಿರಿ ಜಿಲ್ಲೆಗಳಲ್ಲಿ 1,451 ಕ್ಲಸ್ಟರ್‌ಗಳನ್ನು ಆಯ್ಕೆ ಮಾಡಲಾಗಿದೆ.

2011ರ ಜನಗಣತಿ ಪ್ರಕಾರ, ಮಹಿಳಾ ಸಾಕ್ಷರತಾ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ (ಶೇ 46.13) ಕಡಿಮೆ ಇರುವ ಹಾಗೂ ಲಿಂಗ ಸಮಾನತೆಯ ಅಂತರ ರಾಷ್ಟ್ರೀಯ ಸರಾಸರಿಗಿಂತ (ಶೇ 21.59) ಹೆಚ್ಚಿಗೆ ಇರುವ ಕಂದಾಯ ಬ್ಲಾಕ್‌ಗಳು, ಆಯ್ದ ಕೊಳೆಗೇರಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ.

5ರಿಂದ 8ನೇ ತರಗತಿಯ ಹೆಣ್ಣುಮಕ್ಕಳಿಗೆ ವಿವಿಧ ವೃತ್ತಿ ಪರಿಚಯಿಸಲು ಪೊಲೀಸ್ ಠಾಣೆ, ನ್ಯಾಯಾಲಯ, ತಾಲ್ಲೂಕು ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ, ಕಾರ್ಖಾನೆ, ಹಾಲಿನ ಡೇರಿ, ಗ್ರಂಥಾಲಯ ಮೊದಲಾದವುಗಳಿಗೆ ಕರೆದುಕೊಂಡು ಹೋಗಲಾಗುವುದು.

ಹೆಣ್ಣು ಮಕ್ಕಳಿಗೆ ಅವಶ್ಯ ಎನಿಸುವ ಆರೋಗ್ಯ, ಶೈಕ್ಷಣಿಕ, ವೃತ್ತಿ ಮಾರ್ಗದರ್ಶನ ನೀಡಲು ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರ ಆರಂಭಿಸಲಾಗುವುದು. ವೈದ್ಯರು, ವೃತ್ತಿ ಸಲಹೆಗಾರರು, ವಕೀಲರು, ಶಿಕ್ಷಣ ತಜ್ಞರು, ವ್ಯಕ್ತಿತ್ವ ವಿಕಸನ ತರಬೇತಿದಾರರಿಂದ ಸಮಾಲೋಚನಾ ಕಾರ್ಯಕ್ರಮ ಏರ್ಪಡಿಸಬಹುದು. ಹದಿಹರೆಯದ ಸಮಸ್ಯೆಗಳು ಹಾಗೂ ನಿರ್ವಹಣೆ ಬಗ್ಗೆ ಅರಿವು ಮೂಡಿಸಲಾಗುವುದು.

ಆಯ್ಕೆಯಾದ ಕ್ಲಸ್ಟರ್‌ಗಳ ವ್ಯಾಪ್ತಿಗೆ ಒಳಪಡುವ ಎಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ನವೋದಯ ಶಾಲೆ ಪ್ರವೇಶ ಪರೀಕ್ಷೆಗೆ ಹಾಜರಾಗುವಂತೆ ಮಾರ್ಗದರ್ಶನ ನೀಡಲಾಗುವುದು. ಇದಕ್ಕಾಗಿ ಅನುದಾನ ಕಲ್ಪಿಸಲಾಗುವುದು.

ಏನಿದು ಕಾರ್ಯಕ್ರಮ?
ದಾಖಲಾತಿ, ಹಾಜರಾತಿಗಾಗಿ ಅಗತ್ಯ ಅನುಕೂಲ ಕಲ್ಪಿಸುವುದು ಮತ್ತು ಅಭಿವೃದ್ಧಿಪಡಿಸುವುದು. ಕಾರ್ಯತಂತ್ರಗಳ ಮೂಲಕ ಶಿಕ್ಷಣದ ಗುಣಮಟ್ಟ ಉತ್ತಮಪಡಿಸುವುದು. ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳ 6-14 ವಯೋಮಾನದ ಹೆಣ್ಣುಮಕ್ಕಳ ಜೀವನ ಕೌಶಲದಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸುವುದು. ಅವರ ಸಮಸ್ಯೆಗಳಿಗೆ ಕ್ರಿಯಾ ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳುವುದು. ಲಿಂಗ ತಾರತಮ್ಯ ಹೋಗಲಾಡಿಸುವುದು. ಆತ್ಮವಿಶ್ವಾಸ ಹೆಚ್ಚಿಸುವುದು ಯೋಜನೆಯ ಉದ್ದೇಶ.

ಅನುದಾನದಲ್ಲಿ, ಹೊಲಿಗೆ ಯಂತ್ರ, ಕಂಪ್ಯೂಟರ್, ಸೈಕಲ್, ತೋಟಗಾರಿಕೆ, ಸಂಗೀತ ಕಲಿಕೆಗೆ ಸಂಬಂಧಿಸಿದ ಉಪಕರಣಗಳನ್ನು ಖರೀದಿಸಬಹುದು. ಬಟ್ಟೆ ಹೊಲಿಯುವುದು, ನೂಲುವುದು, ನೇಯ್ಗೆ, ಕಸೂತಿ, ಸೈಕಲ್, ಟಿ.ವಿ., ರೇಡಿಯೊ, ಮೊಬೈಲ್, ವಿದ್ಯುತ್ ಉಪಕರಣ- ಇತ್ಯಾದಿ ವಸ್ತುಗಳ ರಿಪೇರಿ, ಎರೆಹುಳು ಗೊಬ್ಬರ, ಜೇನು ಕೃಷಿ, ಮತ್ಸ್ಯಾಗಾರ (ಅಕ್ವೇರಿಯಂ) ನಿರ್ವಹಣೆ, ಕಸಿ ಮಾಡುವುದು, ಬಡಗಿ ಕೆಲಸ, ವೈರಿಂಗ್, ಸೌಂದರ್ಯ ಚಿಕಿತ್ಸೆ, ಅಣಬೆ ಕೃಷಿ.

ವಿವಿಧ ಬಗೆಯ ಮಾಪಕಗಳು, ಆಹಾರ ಪದಾರ್ಥ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಬೇಕರಿ ಉತ್ಪನ್ನಗಳ ತಯಾರಿಕೆ, ಶೃಂಗಾರ ವಸ್ತುಗಳು, ಬುಟ್ಟಿ, ಗಂಧದ ಕಡ್ಡಿ, ಮೇಣದಬತ್ತಿ, ಸೀಮೆಸುಣ್ಣ, ಆರೋಗ್ಯ ವರ್ಧಕಗಳು, ಮರಗೆಲಸ, ಕುಂಬಾರಿಕೆ, ಹಲ್ಲಿನಪುಡಿ ತಯಾರಿಕೆ, ಫಿನಾಯಿಲ್ ಮತ್ತು ಸಾಬೂಬು ಪುಡಿ, ಗೊಂಬೆಗಳ ತಯಾರಿಕೆ ಹೇಳಿಕೊಡಲಾಗುವುದು.

ಕ್ಲಸ್ಟರ್‌ಗೆ ಅನುದಾನ ಹಂಚಿಕೆ ವಿವರ
ವೃತ್ತಿ ಕೌಶಲ ಬೆಳವಣಿಗೆ- ರೂ 21 ಸಾವಿರ.
ಕ್ಷೇತ್ರ ಅಧ್ಯಯನ ಮತ್ತು ಅನುಭವ ಹಂಚಿಕೆ- ರೂ 10 ಸಾವಿರ.

ಹೆಣ್ಣು ಮಕ್ಕಳ ಮಾರ್ಗದರ್ಶಿ ಕೇಂದ್ರ- ರೂ 10 ಸಾವಿರ.

ನವೋದಯ ಪರೀಕ್ಷಾ ತರಬೇತಿ- ರೂ 10 ಸಾವಿರ.

ಸಮುದಾಯ ಸಂಚಲನ ಮತ್ತು ನಿರ್ವಹಣಾ ವೆಚ್ಚ- ರೂ 2,868.

ಮುಖ್ಯಾಂಶಗಳು
 ಶಾಲೆಯತ್ತ ಬಾಲಕಿಯರ ಸೆಳೆಯಲು ಕ್ರಮ.
 1,451 ಮಾದರಿ ಕ್ಲಸ್ಟರ್‌ಗಳಲ್ಲಿ ಜಾರಿ.
  ಪ್ರಸಕ್ತ ಸಾಲಿಗೆ ರೂ 7.35 ಕೋಟಿ ಅನುದಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.