ADVERTISEMENT

ಹೆರಿಟೇಜ್ ವಿಲೇಜ್ಗೆ ರೂ.5 ಕೋಟಿ- ಸಿ.ಎಂ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST
ಹೆರಿಟೇಜ್ ವಿಲೇಜ್ಗೆ ರೂ.5 ಕೋಟಿ- ಸಿ.ಎಂ
ಹೆರಿಟೇಜ್ ವಿಲೇಜ್ಗೆ ರೂ.5 ಕೋಟಿ- ಸಿ.ಎಂ   

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಕುಪ್ಪಳಿಯಲ್ಲಿ ಕುವೆಂಪು ಸಹ್ಯಾದ್ರಿ ದೇಸಿ ವಸ್ತುಸಂಗ್ರಹಾಲಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ `ಹೆರಿಟೇಜ್ ವಿಲೇಜ್~ಗೆ ಸರ್ಕಾರ ಐದು ಕೋಟಿ ರೂ. ನೀಡಲು ಸಿದ್ಧ ಇದೆ. ಮೊದಲ ಕಂತು 2.5 ಕೋಟಿ ರೂ.ಗಳನ್ನು ಬರಲಿರುವ ಬಜೆಟ್‌ನಲ್ಲಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಘೋಷಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಂಯುಕ್ತವಾಗಿ ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕುವೆಂಪು ಸಹ್ಯಾದ್ರಿ ದೇಸಿ ವಸ್ತುಸಂಗ್ರಹಾಲಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕುಪ್ಪಳಿಯನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲು ನೆರವಾಗಲು ಕವಿಮನೆ ಸಮೀಪದ 10 ಎಕರೆ ಗ್ರಾಮ ಠಾಣಾ ಜಾಗವನ್ನು ಪರಿಶೀಲಿಸಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ಪೂರ್ಣಚಂದ್ರ ತೇಜಸ್ವಿ ಸ್ಮಾರಕ ನಿರ್ವಹಣೆ ಜವಾಬ್ದಾರಿಯನ್ನೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಕ್ಕೆ ವಹಿಸಲು ಕೂಡಲೇ ಆದೇಶ ಮಾಡಲಾಗುವುದು ಎಂದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, ಪ್ರತಿಷ್ಠಾನದ ಕೆಲಸ-ಕಾರ್ಯಗಳಿಗೆ ಎಲ್ಲ ಸರ್ಕಾರಗಳು ಪಕ್ಷ ಬೇಧ ಮರೆತು ಅನುದಾನ ನೀಡುತ್ತಾ ಬಂದಿವೆ. ಸರ್ಕಾರಗಳ ಈ ನೆರವಿನಿಂದ ಇಂದು ಕುಪ್ಪಳಿ ವಿದ್ವತ್ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಇಷ್ಟಾದರೂ ಕುವೆಂಪು ಅವರನ್ನು ಜಗತ್ತಿಗೆ ಬಿಂಬಿಸುವಲ್ಲಿ ನಾವು ವಿಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ಕುಪ್ಪಳಿಯಲ್ಲಿ ಸಾಕಷ್ಟು ಕೆಲಸ- ಕಾರ್ಯಗಳು ಆಗಬೇಕಿದೆ. ಪ್ರಸ್ತುತ ಸರ್ಕಾರ ಉದಾರವಾಗಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ. ಮುರಿಗೆಪ್ಪ ಮಾತನಾಡಿದರು. ಪ್ರೊ.ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಕಿಮ್ಮನೆ ರತ್ನಾಕರ ಅಧ್ಯಕ್ಷತೆ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.