ADVERTISEMENT

ಹೇಮಾಮಾಲಿನಿ ಭಾರತೀಯರಲ್ಲವೇ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 19:05 IST
Last Updated 20 ಫೆಬ್ರುವರಿ 2011, 19:05 IST

 ಬೆಂಗಳೂರು: ಹೊರ ರಾಜ್ಯದವರಾದ ಹೇಮಾಮಾಲಿನಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ರಾಜ್ಯ ಬಿಜೆಪಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವವರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು, ‘ಹೇಮಾಮಾಲಿನಿ ಹೊರ ರಾಜ್ಯದವರಾಗಿರಬಹುದು. ಆದರೆ ಅವರು ಭಾರತೀಯರಲ್ಲವಾ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಆಶಯ ಭಾಷಣ ಮಾಡಿದ ಅವರು, ‘ನಮ್ಮ ರಾಜ್ಯದವರಾಗಿದ್ದ ಎಸ್.ಆರ್. ಬೊಮ್ಮಾಯಿ, ಜಾರ್ಜ್ ಫರ್ನಾಂಡಿಸ್ ಅವರು ಬೇರೆ ರಾಜ್ಯದಿಂದ ಚುನಾಯಿತರಾಗಿದ್ದರು’ ಎಂದು ಹೇಳಿದರು.
‘ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಬೇಕು. ಈ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಬೇಕು ಎಂದು ಈ ಸಮಾವೇಶದ ಮೂಲಕ ಒತ್ತಾಯಿಸುತ್ತಿದ್ದೇನೆ’ ಎಂದ ಅವರು ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶತಸ್ಸಿದ್ಧ’ ಎಂದು ಪುನರುಚ್ಛರಿಸಿದರು.

ಕಾಶ್ಮೀರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ‘ಅವಕಾಶ ಮಾಡಿಕೊಡದ’ ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದ ಈಶ್ವರಪ್ಪ ಅವರು, ‘ಇವತ್ತಲ್ಲಾ ನಾಳೆ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿಯೇ ಸಿದ್ಧ’ ಎಂದರು.

ರಾಜ್ಯ ಸರ್ಕಾರವನ್ನು ಸುತ್ತಿಕೊಂಡಿರುವ ವಿವಿಧ ಹಗರಣಗಳ ಕುರಿತು ಪಕ್ಷದ ವತಿಯಿಂದ ಆಂತರಿಕ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು ಎಂದು ಈಶ್ವರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿಕೊಂಡರು.

ಭಾರತೀಯ ಜನಸಂಘದ ಹಿರಿಯ ನಾಯಕರನ್ನು ಈಶ್ವರಪ್ಪ ಅವರು ತಮ್ಮ ಮಾತಿನುದ್ದಕ್ಕೂ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.