ADVERTISEMENT

ಹೊಸತನವಿಲ್ಲದ ಭಾಷಣ: ಪ್ರತಿಪಕ್ಷ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ಬೆಂಗಳೂರು: ರಾಜ್ಯಪಾಲರ ಭಾಷಣದಲ್ಲಿ ಹೊಸದೇನೂ ಇಲ್ಲ. ಹಳೆಯದನ್ನೇ ಹಿಂದೆ- ಮುಂದೆ ಮಾಡಿ ಓದಲಾಗಿದೆ. ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ, ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ಮರೆತಿದ್ದಾರೆ....

ಹೀಗೆ ಟೀಕೆ ಮಾಡಿದ್ದು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ.

ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ನಂತರ ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು `ಭಾಷಣ ನೀರಸವಾಗಿದೆ. ಪದ ಬಳಕೆಯಲ್ಲಿ ವ್ಯತ್ಯಾಸ ಆಗಿರುವುದು ಬಿಟ್ಟರೆ ವಿಚಾರದಲ್ಲಿ ಹೊಸದೇನೂ ಇಲ್ಲ' ಎಂದು ಟೀಕಿಸಿದರು.

`ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಬದ್ಧತೆಯನ್ನು ತೋರಿಸಿಲ್ಲ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಹೇಳಿದ್ದನ್ನೇ ಪುನರಾವರ್ತನೆ ಮಾಡಲಾಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಕಾಂಗ್ರೆಸ್ ಈ ಹಿಂದೆ ಆಕ್ಷೇಪ ಎತ್ತಿತ್ತು. ಆದರೆ, ಈಗ ಅದೇ ಪಕ್ಷದ ಸರ್ಕಾರದ ಮುಂದಿನ ವರ್ಷ ಹೂಡಿಕೆದಾರರ ಸಮಾವೇಶ ಆಯೋಜಿಸುವ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ತಕ್ಷಣ ಆದ್ಯತೆ ಏಕೆ ಬದಲಾಯಿತು' ಎಂದು ಪ್ರಶ್ನಿಸಿದರು.

ಭಾಷಣದಲ್ಲಿ ಹೆಚ್ಚಾಗಿ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ರಾಜ್ಯಪಾಲರು ಯುಪಿಎ ಹಗರಣಗಳನ್ನು ಏಕೆ ಮರೆತಿದ್ದು? ಆ ಬಗ್ಗೆಯೂ ಉಲ್ಲೇಖಿಸಬೇಕಿತ್ತು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಸದಾನಂದ ಗೌಡ ವ್ಯಂಗ್ಯ: ರಾಜ್ಯಪಾಲರ ಭಾಷಣದಲ್ಲಿ ಹೊಸತನ, ಹೊಸರೂಪ, ಹೊಸ ವ್ಯವಸ್ಥೆ ಇಲ್ಲ. ಅಧಿಕಾರ ವಹಿಸಿಕೊಂಡ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗ್ಗದ ಮದ್ಯ ತಯಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈಗ ರಾಜ್ಯಪಾಲರ ಕೈಯಲ್ಲಿ ಅಗ್ಗದ ಭಾಷಣ ಮಾಡಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.

ಸಾಚಾರ್ ಸಮಿತಿ ಮಾಡಿರುವ ಶಿಫಾರಸುಗಳಿಗೆ ದೇಶದಲ್ಲಿ ವಿರೋಧವಿದೆ. ಆದರೆ, ರಾಜ್ಯ ಸರ್ಕಾರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಸ್ಲೀಮರ ಏಳಿಗೆಗೆ ಕ್ರಮಕೈಗೊಳ್ಳಲಾಗುವುದು ಎನ್ನುವ ಮೂಲಕ ಬೆಂಕಿಹಚ್ಚುವ ಕೆಲಸ ಮಾಡಿದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಸದನದ ಹೊರಗೆ ಹೇಳಿದ್ದನ್ನೇ `ಬುಕ್‌ಲೆಟ್' ಮಾಡಿಸಿ ರಾಜ್ಯಪಾಲರ ಮೂಲಕ ಸದನದಲ್ಲಿ ಹೇಳಿಸುವ ಮೂಲಕ ರಾಜ್ಯಪಾಲರ ಗೌರವಕ್ಕೆ ಸ್ವಲ್ಪಮಟ್ಟಿಗೆ ಚ್ಯುತಿಯನ್ನುಂಟು ಮಾಡಿದ್ದಾರೆ ಎಂದು ಟೀಕಿಸಿದರು. ಹಿಂದಿನವರು ಮಾಡಿರುವ ತಪ್ಪುಗಳನ್ನು ನಾವು ಮಾಡುವುದಿಲ್ಲ ಎಂದಷ್ಟೇ ಹೇಳುವ ಬದಲು, ಹಿಂದಿನ ಸರ್ಕಾರದ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಸರಿಯಲ್ಲ ಎಂದರು

ಅಕ್ಷಮ್ಯ ಅಪರಾಧ
ಕಳೆದ ಕೆಲವು ವರ್ಷಗಳಿಂದ ಬಯಲಿಗೆ ಬಂದಿರುವ ಭ್ರಷ್ಟಾಚಾರ, ಹಗರಣಗಳಿಂದಾಗಿ ದೇಶದ ಎದುರು ಕರ್ನಾಟಕ ತಲೆತಗ್ಗಿಸುವಂತಾಗಿದೆ ಎಂದು ರಾಜ್ಯಪಾಲರ ಬಾಯಲ್ಲಿ ಹೇಳಿಸುವ ಮೂಲಕ ಸರ್ಕಾರ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿರುವುದು ಅಕ್ಷಮ್ಯ ಅಪರಾಧ. ಯುಪಿಎ ಸರ್ಕಾರದ ಭ್ರಷ್ಟಾಚಾರದಿಂದಾಗಿ ಭಾರತ ಪ್ರಪಂಚದ ಮುಂದೆ ತಲೆತಗ್ಗಿಸುವಂತಾಗಿದೆ ಎಂದಿದ್ದರೆ ಸೂಕ್ತವಾಗುತ್ತಿತ್ತು.
-ಬಿ.ಎಸ್.ಯಡಿಯೂರಪ್ಪ, ಕೆಜೆಪಿ ಅಧ್ಯಕ್ಷ

ನೈತಿಕ ಹಕ್ಕಿಲ್ಲ

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ನಿರ್ದಿಷ್ಟ ಪ್ರಕರಣ ಇದ್ದರೆ ಹೇಳಲಿ. ಅದು ಬಿಟ್ಟು ಸಾರಾಸಗಟಾಗಿ ಟೀಕೆ ಮಾಡಿರುವುದು ಸರಿಯಲ್ಲ. ಕೇಂದ್ರದ ಯುಪಿಎ ಸರ್ಕಾರ ಹಲವು ಹಗರಣಗಳಲ್ಲಿ ಸಿಲುಕಿದೆ. ರಾಜ್ಯಪಾಲರ ಮೂಲಕ ಭ್ರಷ್ಟಾಚಾರದ ಬಗ್ಗೆ ಹೇಳಿಸಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ.
- ಜಗದೀಶ ಶೆಟ್ಟರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ

ಸರ್ಕಾರ ಮೆಚ್ಚಿಸುವ ಭಾಷಣ

ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯಲು ಆಗ್ರಹಿಸಿ ಎರಡು ದಿನ ಉಪವಾಸ ಮಾಡಿದೆ. ಆದರೆ, ಆ ಬಗ್ಗೆ ಭಾಷಣದಲ್ಲಿ ಚಕಾರ ಇಲ್ಲ. ಕಾವೇರಿ, ಕೃಷ್ಣಾ, ಭದ್ರಾ ಮೇಲ್ದಂಡೆ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿಲ್ಲ. ವಾಜಪೇಯಿ ಆರೋಗ್ಯಶ್ರೀ, ಆರೋಗ್ಯ ಕವಚ 108 ಬಲಪಡಿಸಿದ್ದರೆ ಸಾಕಾಗಿತ್ತು. ಆ ರೀತಿ ಮಾಡದೆ ವಿಮಾ ಯೋಜನೆಯ ಬಗ್ಗೆ ಗೊಂದಲ ಮೂಡಿಸಲಾಗಿದೆ. ಒಟ್ಟಾರೆ ರಾಜ್ಯಪಾಲರ ಭಾಷಣ ಸರ್ಕಾರವನ್ನು ಮೆಚ್ಚಿಸುವಂತಿದೆ. ಜನಸಾಮಾನ್ಯರನ್ನು ಅಲ್ಲ.
-ಬಿ.ಶ್ರೀರಾಮುಲು, ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.