ADVERTISEMENT

ಹೊಸ ಬಾಳ ಹೊಸ್ತಿಲು ತುಳಿದ 781 ಜೋಡಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಗದಗ:  ನಗರದ ಬಿ.ಶ್ರೀರಾಮುಲು ಅಭಿಮಾನಿ ಬಳಗ ಶುಕ್ರವಾರ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಚಿತ್ರನಟರು ಹಾಗೂ ಬಂಧುಗಳ ಸಮ್ಮುಖದಲ್ಲಿ 781 ಜೋಡಿ ಹೊಸ ಬಾಳಿನ ಹೊಸ್ತಿಲು ತುಳಿದರು.

ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ.ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ, ಫಕ್ಕೀರೇಶ್ವರ ಮಠದ ಫಕ್ಕೀರ ಸಿದ್ಧರಾಮ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಸ್ವಾಮೀಜಿ, ಬೂದೀಶ್ವರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಸೊರಟೂರಿನ ಫಕ್ಕೀರೇಶ್ವರ ಸ್ವಾಮೀಜಿ, ಕೋಲ್ಕತ್ತಾದ ಅಬ್ದುಲ್ ತಾಹೀಮ್ ರೆಹಮಾನ್ ಹಾಗೂ ಚಿತ್ರನಟ ಪ್ರೇಮ್ ದಂಪತಿ ನೂತನ ದಂಪತಿಗಳಿಗೆ ಅಕ್ಷತೆ ಹಾಕಿ ಶುಭ ಕೋರಿದರು.

ಬೆಳಿಗ್ಗೆಯೇ ಐವರು ಪುರೋಹಿತರು ಲಕ್ಷ್ಮೀನಾರಾಯಣ, ನವಗ್ರಹ ಮತ್ತು ಕಳಸ ಪೂಜೆ ನೆರವೇರಿಸಿದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮಧ್ಯಾಹ್ನ 2 ಗಂಟೆಗೆ ವಿವಾಹ ನೆರವೇರಿತು.

ಶ್ರೀರಾಮುಲು ಅವರು ಪ್ರತಿ ಜೋಡಿ ಬಳಿಗೂ ತೆರಳಿ ಅಕ್ಷತೆ ಹಾಕಿ ಶುಭ ಕೋರಿದರು. ವಧು-ವರರಿಗೆ ಬಂಗಾರದ ತಾಳಿ, ಬೆಳ್ಳಿ ಕಾಲುಂಗರ, ಬಟ್ಟೆ ನೀಡಲಾಯಿತು. ಜತೆಗೆ ಈ ದಂಪತಿಗಳಿಗೆ ಆದರ್ಶ ವಿವಾಹ ಯೋಜನೆಯಲ್ಲಿ 10 ಸಾವಿರ ರೂಪಾಯಿ ಪ್ರೋತ್ಸಾಹ ಧನ ದೊರೆಯಲಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಚ್.ಎಸ್.ಪರಮೇಶ್ವರಪ್ಪ, ಸೂಕ್ತ ದಾಖಲಾತಿ ಒದಗಿಸಲು ವಿಫಲರಾದ 46 ಜೋಡಿಗಳನ್ನು ಹೆಸರು ನೋಂದಣಿ ಸಂದರ್ಭದಲ್ಲಿಯೇ ತಿರಸ್ಕರಿಸಲಾಗಿತ್ತು ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT