ADVERTISEMENT

ಹೋರಾಟದಿಂದ ವಿಧಾನಮಂಡಲಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST
ಹೋರಾಟದಿಂದ ವಿಧಾನಮಂಡಲಕ್ಕೆ
ಹೋರಾಟದಿಂದ ವಿಧಾನಮಂಡಲಕ್ಕೆ   

ಹರ್ಷವರ್ಧನ ಪಿ.ಆರ್.
ಗುಲ್ಬರ್ಗ: `ದೇವರಿಗೆ ಬಿಟ್ಟ ಗೂಳಿಯ ಹಿಂದೆ ನಾಯಿ ಆಸೆಯಿಂದ ಓಡ್ತಾ ಇದೆ...~ ಎಂದು 1984ರ ಸುಮಾರಿನಲ್ಲಿ ವಿಧಾನಸಭೆಯಲ್ಲಿ ಜೆ.ಎಚ್.ಪಟೇಲ್ ಹಾಸ್ಯಭರಿತವಾಗಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ಗೆ ಹೇಳಿದ ಮಾತಿಗೆ ಇಂದು ಯಾರೂ ಹೊರತಾಗಿಲ್ಲ.~

ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಈಗ 74 ವರ್ಷದವರಾಗಿರುವ ಶಿವರುದ್ರಪ್ಪ ಕರಿಸಿದ್ದಪ್ಪ ಕಾಂತಾ (ಎಸ್.ಕೆ. ಕಾಂತಾ) ವಿಧಾನಮಂಡಲಕ್ಕೆ 60ನೇ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ `ಪ್ರಜಾವಾಣಿ~ ಜೊತೆ ನೆನಪು ಹಂಚಿಕೊಂಡರು.

ಗುಲ್ಬರ್ಗದ ಜವಳಿ ಕಾರ್ಖಾನೆಯ ಉದ್ಯೋಗಿಯಾಗಿದ್ದ ಕಾಂತಾ, 1954ರಲ್ಲಿ ಕಾರ್ಮಿಕ ಹೋರಾಟದ ಮೂಲಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಪ್ರಜಾ ಸೋಷಲಿಸ್ಟ್ ಪಾರ್ಟಿಯಲ್ಲಿದ್ದುಕೊಂಡೇ ಹೋರಾಟ ನಡೆಸುತ್ತಿದ್ದರು. ಅವರನ್ನು ಗುರುತಿಸಿದ ಜಾರ್ಜ್ ಫೆರ್ನಾಂಡಿಸ್ 1983ರಲ್ಲಿ ಜನತಾ ಪಕ್ಷದ ಗುಲ್ಬರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದರು.

 ಮೊರಾರ್ಜಿ ದೇಸಾಯಿ, ಮಧು ದಂಡವತೆ, ಸ್ವಾಮಿ ಅಗ್ನಿವೇಶ್, ನಜೀರ್ ಸಾಬ್ ಮತ್ತಿತರರು ಪ್ರಚಾರಕ್ಕೆ ಬಂದರು. ಕಾಂತಾ ಗೆಲುವು ಸಾಧಿಸಿದರು. 1985ರಲ್ಲಿ ಮರು ಆಯ್ಕೆಯಾಗಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಕಾರ್ಮಿಕ ಸಚಿವರಾದರು. `ಶಾಸಕನಾಗುವ ಮೊದಲೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಶಾಂತವೇರಿ ಗೋಪಾಲಗೌಡ, ಬಿ.ಜಿ.ಬಣಕಾರ್, ಎಸ್.ಶಿವಪ್ಪ, ವೈಕುಂಠ ಬಾಳಿಗಾ, ಎಂ. ನಾಗಪ್ಪ, ನಿಜಲಿಂಗಪ್ಪ ಮತ್ತಿತರರ ಮಾತುಗಳನ್ನು ಆಲಿಸುತ್ತಿದ್ದೆ.  ಆಗ ಊಟವೇ ಬೇಡವಾಗಿತ್ತು. ಚರ್ಚೆಗಳು ವಿಚಾರಯುತವಾಗಿತ್ತು. ಗಂಭೀರ ವಿಚಾರಗಳ ಸ್ವಾರಸ್ಯ- ಹಾಸ್ಯ ಮಿಶ್ರಿತ ಮಾತುಗಳನ್ನು ಕೇಳುವುದೇ ಸಂಭ್ರಮವಾಗಿತ್ತು.

`ಈಗ ಗುತ್ತಿಗೆದಾರರು, ಬಂಡವಾಳಶಾಹಿಗಳು, ಕಳ್ಳಕಾಕರು ಸೇರಿದಂತೆ ಶೋಷಣೆ ಮಾಡುವವರೇ  ಜಾತಿ-ಹಣ ಬಳಸಿ ವಿಧಾನ ಮಂಡಲ ಪ್ರವೇಶಿಸುತ್ತಿದ್ದಾರೆ. ಅವರಿಂದ ಪ್ರಜಾಪ್ರಭುತ್ವ ನಿರೀಕ್ಷಿಸಲು ಸಾಧ್ಯವೇ? ರೈತರ, ಕೂಲಿಕಾರರ, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ಕೇಳಬಹುದೇ? ಏನನ್ನು ನಿರೀಕ್ಷಿಸಲು ಸಾಧ್ಯ?...~ಎಂದು ಪ್ರಶ್ನಿಸುತ್ತಾರೆ. `

ಹಸಿವೆಗಾಗಿ ವಲಸೆ ಹೋಗುವ ಪ್ರವೃತ್ತಿ ಹೆಚ್ಚಾಗಿದೆ. ಹೀಗಾಗಿ ಗಟ್ಟಿಯಾದ ಹೋರಾಟ, ನಾಯಕರು ಇಲ್ಲ.  ಸ್ವಾಭಿಮಾನ ಬಿಟ್ಟರೆ ಶಾಸಕರಾಗಬಹುದು. ಜಾತ್ಯತೀತತೆ, ಸಮಾಜವಾದದ ಆದರ್ಶಗಳಿಗೆ ಜನರ ಬಳಿಯೇ ಬೆಲೆ ಇಲ್ಲದಾಗ ಮೂರ್ಖನಂತೆ ಚುನಾವಣೆ ನಿಲ್ಲುವುದರಲ್ಲೂ ಅರ್ಥವಿಲ್ಲ ಎಂದು ಕೈಬಿಟ್ಟಿದ್ದೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.